ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಟೈಮ್ ಸರಿ ಇದ್ದಂತೆ ಕಾಣುತ್ತಿಲ್ಲ, ಕಳೆದ ಕೆಲ ದಿನಗಳಿಂದ ದಿನಕ್ಕೊಬ್ಬರು ಬೆನ್ನಿಗೆ ಬಿದ್ದಂತೆ ವಾಚಮಾಗೋಚರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷನ ನೇಮಕ ಕುರಿತು ನಿನ್ನೆ ಸಂಸದ ಡಾ ಕೆ ಸುಧಾಕರ್ (Dr K Sudhakar) ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ಬೆನ್ನಲ್ಲೇ, ಇಂದು ವಿಜಯೇಂದ್ರ ಬೆಂಬಲಿಗ ಪ್ರೀತಂ ಗೌಡ (Preetham Gowda), ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ತಿರುಗೇಟು ನೀಡಿದ್ದರು
ಇದಾದ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ (Basana Gouda Patila Yatnal), ವಿಜಯೇಂದ್ರ (Vijayendra) ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದರೆ, ಪ್ರೀತಂ ಗೌಡ ಯಾವ ಮಹಾನಾಯಕ ಎಂಬಂತೆ ಲೇವಡಿ ಮಾಡಿದರು.
ಮೊದಲಿಗೆ ಡಾ ಕೆ ಸುಧಾಕರ್ (Dr K Sudhakar) ವಿರುದ್ಧ ಚಿಕ್ಕಬಳ್ಳಾಪುರ ಬರೆದುಕೊಟ್ಟಿಲ್ಲ, ದುರಂಕಾರದ ಮಾತಾಡಬಾರದು ಎಂದು ಪ್ರೀತಂ ಗೌಡ (Preetham Gowda) ಎಚ್ಚರಿಕೆ ಕುರಿತು ಪ್ರತಿಕ್ರಿಯೆ ನೀಡಿ, ಎಂಥವನ ಹೆಸರು ತೆಗಿತೀರಾ.. ಸುಮ್ಮ ಆರಾಮಾಗಿರೋ ಟೈಮಲ್ಲಿ.. ಹೋಗ್ಲಿ ಕಾಂಗ್ರೆಸ್ ನಲ್ಲಿ ರಿಸರ್ವೇಷನ್ ಯಾವುದು ಆಗೈತೆ ಕೇಳಿಕೊಂಡು ಬರ್ಲಿ ಎಂದು ಪ್ರೀತಂ ಗೌಡ ಕಾಂಗ್ರೆಸ್ ಸೇರ್ಪಡೆ ಮಾತಿನ ಕುರಿತು ಯತ್ನಾಳ್ ಲೇವಡಿ ಮಾಡಿದರು.
ಈ ವೇಳೆ ಪ್ರೀತಂ ಗೌಡ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಲ್ವಾ ಸರ್ ಎಂದು ಸುದ್ದಿಗಾರರು ಕೇಳಿದಾಗ.. ಯಾವುದು, ಯಾರಿಗೆ… ವಿಜಯೇಂದ್ರಗೆ ನಮಗಲ್ಲ ಎಂದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಬಿಡಬೇಡ ಅಂತ ಹೇಳಿದ್ದರು, ಅವರ ಮಾತು ಕೇಳದೆ ಬಿಜೆಪಿ ಸೇರಿ ತಪ್ಪು ಮಾಡಿದೆ ಅಂತ ಸುಧಾಕರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ ಮನಸ್ಸಿಗೆ ನೋವಾದಾಗ ಅಂಥ ಮಾತುಗಳು ನೆನಪಾಗುತ್ತವೆ ಎಂದು ಸಮರ್ಥಿಸಿದರು.
ಡಾ.ಕೆ ಸುಧಾಕರ್ ಸೇರಿದಂತೆ 17 ಜನ ಬಿಜೆಪಿ ಸೇರ್ಪಡೆ ಆಗ್ದೆ ಇದ್ದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾ ಇದ್ರಾ..? ನಂಬರ್ ಒನ್, ಇವತ್ತು ವಿಜಯೇಂದ್ರಗೆ ಇಷ್ಟು ದುಡ್ಡಿನ ದುರಂಕಾರ ಬಂದಿದೆಯಲ್ಲ ಅ ದುರಂಕಾರ ಇರ್ತಿತ್ತಾ..? ಇಲ್ಲ.
ಯಾಕೆಂದರೆ ಇಷ್ಟು ದುಡ್ಡು ಆಗಿಬಿಟ್ಟಿದೆಯಲ್ಲ ಬಹುಶಃ ಯಾವ ಮುಖ್ಯಮಂತ್ರಿ ಮಾಡಿರಲಿಕ್ಕಿಲ್ಲ ಅಷ್ಟು ದುಡ್ಡು ಮಾಡಿ ಪಾಪಾ ಮತ್ತೆ ಪಾದಯಾತ್ರೆ ಮಾಡ್ತಾನಂತೆ ಮೂಡ ಸಲುವಾಗಿ, ಸಿದ್ದರಾಮಯ್ಯ ವಿರುದ್ಧ. ಇವರ ಹಗಣರವೇ ಒದ್ದಾಡಿ ನಾರಲಕತೈತಿ, ಇವ ಹೋಗಿ ಸಿದ್ದರಾಮಯ್ಯನವರು ತಕ್ಷಣ ರಾಜೀನಾಮೆ ಕೊಡಬೇಕು, ಮೈಸೂರು ಮುಟ್ಟೋದ್ರೊಳಗೆ ರಾಜೀನಾಮೆ ಕೊಡಬೇಕು ಅಂತಾನೆ..
ಏನ್ರೀ ಮಾನ ಮರ್ಯಾದೆ ಇದೆಯೇ…? ಆ ಸಿದ್ದರಾಮಯ್ಯಗೂ ಬುದ್ದಿ ಇಲ್ಲ.. ಇವ (ವಿಜಯೇಂದ್ರ) ಮಾಡಿರೋ ಅವರಪ್ಪನ ನಕಲಿ ಸಹಿ ತನಿಖೆಗೆ ಕೊಟ್ಟಿದ್ರೆ.. ಮುಗ್ದೋಗಿರೋದ್ ಇವನ ಹೋರಾಟ ಎಂದು ವ್ಯಂಗ್ಯವಾಡಿದರು.
ಅಲ್ಲದೆ ದೂರು ಕೊಟ್ಟರೆ ಕ್ರಮ ಎಂದ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದು, ನಾನಾಗಿದ್ರೆ ಸ್ವಯಂ ಪ್ರೇರಿತ ದೂರು ದಾಖಲಿಸುತ್ತಿದ್ದೆ ಎಂದರು.
ವಿಜಯೇಂದ್ರ ಚಡ್ಡಿ ಹಾಕೋಕ್ಕಿಂತ ಮುಂಚೆ ನಾನು ಜಿಲ್ಲಾಧ್ಯಕ್ಷನಾಗಿದ್ದೆ. ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ. ನಮ್ಮೆಲ್ಲರ ದುಡಿಮೆ ಇದೆ. ಅಲ್ಲದೆ, ವಿಜಯೇಂದ್ರನಿಂದ ನಾವು ಏನೂ ಕಲಿಯಬೇಕಾಗಿಲ್ಲ ಎಂದು ಗುಡುಗಿದರು.