ಬೆಂಗಳೂರು (Case back): ಸೋಮವಾರ ಸಂಜೆ ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿಯ ವೈಭವದ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಉದ್ಘಾಟಿಸಿದರು.
ಇದೇ ವೇಳೆ ಕನ್ನಡಪರ ಹೋರಾಟಗಾರರ ಎಲ್ಲಾ ಕೇಸ್ ವಾಪಾಸ್ ಪಡೆಯಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಈ ಕುರಿತು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ನಿರ್ಣಯವನ್ನು ಪ್ರಶಂಸೆ ವ್ಯಕ್ತಪಡಿಸಿದ್ದು, ನಾಡಿನ ಪ್ರತಿಯೊಬ್ಬ ಹೋರಾಟಗಾರನ ಮೇಲಿನ ಪ್ರಕರಣ ಹಿಂಪಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿಎಸ್ ಚಂದ್ರಶೇಖರ್, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎ ನಂಜಪ್ಪ ಮಾತನಾಡಿ, ನಾಡು ನುಡಿಗಾಗಿ ಹೋರಾಡಿ ಪ್ರಕರಣ ದಾಖಲಿಸಿಕೊಂಡು ಕೋರ್ಟಿಗೆ ಅಲೆಯುತ್ತಿರುವ ಹೋರಾಟಗಾರರ ಪರ ರಾಜ್ಯ ಸರ್ಕಾರ ಪ್ರಶಂಸನೀಯ ನಿರ್ಧಾರ ಮಾಡಿದೆ ಎಂದಿದ್ದಾರೆ.
ಕನ್ನಡದ ಅಸ್ಮಿತೆಯ ಉಳಿವಿಗೆ ಬರುವವರು ಚಿಲ್ಲರೆ ಅಂಗಡಿ ನಡೆಸುವವರು, ಚಿಕ್ಕ ಹೋಟೆಲ್ ನಡೆಸುವವರು, ಆಟೋ, ವ್ಯಾನ್ ಚಾಲಕರುಗಳು ಹೆಚ್ಚಾಗಿ ಭಾಗವಹಿಸುತ್ತಾರೆ. ಇವೆರೆಲ್ಲ ದೊಡ್ಡ ದೊಡ್ಡ ಕುಟುಂಬದಿಂದ ಬಂದವರಲ್ಲ. ಬಡ ಕುಟುಂಬದಿಂದ ಬಂದವರು. ಆದರೆ ಇವರಲ್ಲಿ ಕನ್ನಡ ನಾಡು, ನುಡಿ ಉಳಿವಿಗಾಗಿ ಹೋರಾಟದ ಮನೋಭಾವದ ಹೆಚ್ಚಿರುತ್ತದೆ.
ಈ ರೀತಿ ಭುವನೇಶ್ವರಿ ತಾಯಿಯ ಸೇವೆಗೆಂದು ಬಂದ ನಂತರ ಹೋರಾಟದಲ್ಲಿ ಪಾಲ್ಗೊಂಡು ಅನೇಕ ಕೇಸುಗಳನ್ನು ದಾಖಲಿಸಿಕೊಂಡು, ಬಂಧನಕ್ಕೆ ಒಳಗಾಗಿ, ಕೋರ್ಟು ಕಚೇರಿ ಅಲೆಯುವಂತಾಗಿ ಬಡ ಹೋರಾಟಗಾರನ ಜೀವನ ನಿರ್ವಹಣೆಗೆ ತೊಡಕಾಗುತ್ತಿದ್ದು, ಹೋರಾಟದ ಮನೋಭಾವದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಈ ಹೋರಾಟಗಾರರಿಗೆ ಅನೇಕ ವಕೀಲರು ನೆರವಾಗಿದ್ದು, ಅವರ ಪಾತ್ರ ಅಪಾರವಾಗಿದೆ.
ಇದನ್ನು ಮನಗಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕನ್ನಡಪರ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣ ಹಿಂಪಡೆಯಲು ಮುಂದಾಗಿರುವುದು ಪ್ರಶಂಸನೀಯ.
ಕನ್ನಡಕ್ಕೆ ಸಿದ್ದ ರಾಮಯ್ಯ
ರಾಜಕೀಯ ಆರೋಪ ಪ್ರತ್ಯಾರೋಪ ಏನೆ ಇರಲಿ, ಕನ್ನಡದ ವಿಚಾರ ಬಂದಾಗ ಮುಖ್ಯಮಂತ್ರಿಗಳು ಕನ್ನಡಕ್ಕೆ ಸಿದ್ದ ರಾಮಯ್ಯ ಎಂದೇ ಪ್ರಶಂಸೆ ವ್ಯಕ್ತಪಡಿಸಬಹುದಾಗಿದೆ.
ನಗರಕ್ಕೆ ಸೀಮಿತವಾಗದಿರಲಿ
ಆದರೆ ಈ ಘೋಷಣೆ ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗದ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಆದೇಶ ನೀಡಿ, ಹಳ್ಳಿಯಲ್ಲಿ ಕನ್ನಡದ ಸೇವೆಗಾಗಿ ಕೇಸ್ ದಾಖಲಿಸಿಕೊಂಡ ಸಾಮಾನ್ಯ ಹೋರಾಟಗಾರನ ಪ್ರಕರಣ ಹಿಂಪಡೆಯುವಂತಾಗಬೇಕು.
ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕಿದೆ, ಮುಖ್ಯಮಂತ್ರಿಗಳ ಆದೇಶ ಕೇವಲ ಮಾಧ್ಯಮಗಳ ಹೇಳಿಕೆಗೆ ಸೀಮಿತವಾಗದೆ ತ್ವರಿತವಾಗಿ ಕಾರ್ಯ ರೂಪಕ್ಕೆ ತರಲಿ ಎಂದು ಒತ್ತಾಯಿಸಿದ್ದಾರೆ.