ಬೆಂಗಳೂರು: ಕನ್ನಡದ ಸುಪ್ರಸಿದ್ದ ರಿಯಾಲಿಟಿ ಶೋ ಬಿಗ್‌ಬಾಸ್ (Bigg boos) ಸೀಸನ್ 11ಕ್ಕೆ ಭಾನುವಾರ ತೆರೆಬಿದ್ದಿದೆ. ಹನುಮಂತು ಬಿಗ್‌ಬಾಸ್ ವಿನ್ನರ್ ಪಟ್ಟ ಅಲಂಕರಿಸಿದರೆ, ತ್ರಿವಿಕ್ರಮ್ ರನ್ನರ್ ಆಪ್ ಆಗಿ ಹೊರಹೊಮ್ಮಿದ್ದಾರೆ.
ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ ಪೈ ನಡುವೆ ತೀವ್ರ ಪೈಪೋಟಿಯಿತ್ತು. ಈ ಬಾರಿ ಮಹಿಳಾ ಸ್ಪರ್ಧಿಗೆ ಬಿಗ್‌ಬಾಸ್ ಕಿರೀಟ ಒಲಿಯಲಿದೆ ಎನ್ನಲಾಗಿತ್ತು. ಅದರಲ್ಲಿ ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ ಮುಂಚೂಣಿಯಲ್ಲಿದ್ದರು.
ಈ ಇಬ್ಬರ ನಡುವೆ ಪೈಪೋಟಿ ಜೋರಾಗಿಯೇ ಇತ್ತು. ಆದರೆ ಭವ್ಯಾ ಎಲಿಮಿನೇಟ್ ಆದರು. ಮೋಕ್ಷಿತಾ ಮನೆಯಲ್ಲಿಯೇ ಉಳಿದರು. ಇತ್ತ ರಜತ್‌ಗೆ ವೀಕ್ಷಕರು ಅಷ್ಟಾಗಿ ಒಲವು ತೋರಲಿಲ್ಲ. ಹಾಗಾಗಿ ಅವರು ಮನೆಯಿಂದ ಹೊರಬಂದಿದ್ದು, ಕುತೂಹಲಕ್ಕೆ ಕಾರಣವಾಗಲಿಲ್ಲ.
ಈ ಬಾರಿ ಗೆಲ್ಲುವ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ಮಂಜಣ್ಣ ಅಚ್ಚರಿಯ ರೀತಿಯಲ್ಲಿ ಮನೆಯಿಂದ ಹೊರಬಂದರು. ಹಿಂದೆಯೇ ಮೋಕ್ಷಿತಾ ಹೊರಬಂದರು.
ತ್ರಿವಿಕ್ರಮ್-ಹನುಮಂತು ನಡುವೆ ತೀವ್ರ ಪೈಪೋಟಿ
ಉಳಿದವರಲ್ಲಿ ತ್ರಿವಿಕ್ರಮ್ ಹಾಗೂ ಹನುಮಂತು ಇಬ್ಬರ ನಡುವೆ ತೀವ್ರ ಪೈಪೋಟಿ ಇತ್ತು. ಈ ಇಬ್ಬರಲ್ಲಿ ಹನುಮಂತುಗೆ ದಾಖಲೆಯ ಮತಗಳು ಬಿದ್ದಿದ್ದವು. ಹಾಗಾಗಿ 11ರ ಆವೃತ್ತಿಯ ಬಿಗ್ ಬಾಸ್‌ನ ವಿಜೇತರಾಗಿ ಹನುಮಂತು ಗೆದ್ದು ಬೀಗಿದರು.
ತಮ್ಮ ಮುಗ್ಧತೆ ಯಲ್ಲಿಯೇ ಬಿಗ್‌ಬಾಸ್ ಪ್ರೇಕ್ಷಕರ ಮನಗೆದ್ದಿದ್ದ ಹನುಮಂತು, ಈಗ ಕರುನಾಡಿನ ಜನರ ಮನಸನ್ನು ಗೆದ್ದಿದ್ದಾರೆ.
ರಾತ್ರಿ ಬಿಗ್‌ಬಾಸ್ ವಿನ್ನರ್ ಘೋಷಣೆವರೆಗೂ ಕಾದು ಕುಳಿತಿದ್ದ ಅನೇಕರು ಹನುಮಂತು ಗೆಲವಿನ ಕೈ ಮೇಲೆತ್ತುತ್ತಿದ್ದಂತೆ ಸಂಭ್ರಮಿಸಿದರು. ರಾತ್ರಿ ಮಲಗಿದ್ದವರು, ಬೆಳಗ್ಗೆ ಎದ್ದು ಯಾರು ಗೆದ್ದರೆಂದು ಮಾಹಿತಿ ತಿಳಿದು ಸಂಭ್ರಮಿಸಿದರು.
ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಎಂಬಂತೆ ಬಡ ಕುಟುಂಬ, ಹಳ್ಳಿಗಾಡಿನಿಂದ ಬಂದ ಮುಗ್ಧ ಮನಸ್ಸಿನ ಹನುಮಂತು ಗೆಲುವಿಗಾಗಿ ಓಟ್ ಮಾಡಿದ್ದ ಕರುನಾಡಿನ ಜನರ ಆಶಯದಂತೆ ಹನುಮಂತು ಬಿಗ್ ಬಾಸ್ ಗೆದ್ದಿದ್ದು, ಮಕ್ಕಳು, ಮಹಿಳೆಯರು ಸೇರಿ ಎಲ್ಲರಲ್ಲಿ ಸಂಭ್ರಮ ಮನೆಮಾಡಿದೆ.
ಮಹಿಳೆಯರಾದಿಯಾಗಿ ಮೊಬೈಲ್ಗಳ ವಾಟ್ಸಪ್ ಸ್ಟೇಟಸ್, ಫೇಸ್‌ಬುಕ್ ಪುಟಗಳಲ್ಲಿ ಹನುಮಂತು ಗೆಲುವಿಗೆ ಶುಭಾಶಯ ಹರಿದುಬರುತ್ತಿದೆ.