ದೊಡ್ಡಬಳ್ಳಾಪುರ (Doddaballapura): ಮನೆಯ ಮುಂದಿನ ಆವರಣದಲ್ಲಿ ಮಲಗಿದ್ದ ವೃದ್ಧನ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಹತ್ಯೆಗೈದಿರುವ (Murder) ಘಟನೆ ತಾಲೂಕಿನ ಮೆಳೇಕೋಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ವಾಸುದೇವನಹಳ್ಳಿಯಲ್ಲಿ ಸಂಭವಿಸಿದೆ.
ಮೃತ ವೃದ್ಧನನ್ನು 70 ವರ್ಷದ ಈರಣ್ಣ ಎಂದು ಗುರುತಿಸಲಾಗಿದೆ. ಮೃತನಿಗೆ ಮಡದಿ ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಮನೆಯ ಹೊರಗೆ ಮಲಗಿದ್ದ ವೇಳೆ ತರಕಾರಿ ಹಚ್ಚುವ ಚಾಕುವಿನಿಂದ ಒಂದೇ ಬಾರಿಗೆ ಕುತಿಗೆ ಚುಚ್ಚಿರುವ ದುಷ್ಕರ್ಮಿಗಳು ಚಾಕುವನ್ನು ಅಲ್ಲಿಯೇ ಬಿಟ್ಟಿದ್ದಾರೆ.
ಆದರೆ ಈ ಘಟನೆ ಮನೆಯೊಳಗೆ ಮಲಗಿದ್ದವರಿಗೆ ಅರಿವಾಗದೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಸಿಕೆ ಬಾಬಾ, ಅಡಿಷ್ನಲ್ ಎಸ್ಪಿ ನಾಗರಾಜು, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಸ್‌ಎಫ್‌ಎಲ್), ಡಾಗ್ ಸ್ಕ್ವಾಡ್, ಫಿಂಗರ್ ಪ್ರಿಂಟ್, ಸೂಕೋ ಟೀಮ್ ಭೇಟಿ ನೀಡಿ ಸ್ಥಳದಲ್ಲಿನ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.
ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರನ ಪತ್ತೆ ಗೆ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.