ದೊಡ್ಡಬಳ್ಳಾಪುರ (Doddaballapura); ಹೊಸಕೋಟೆಯಿಂದ ದಾಬಸ್‍ಪೇಟೆಯ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ನಿಗದಿತ ಮಿತಿಗಿಂತ ಹಚ್ಚು ವೇಗದಲ್ಲಿ ಚಲಿಸುವ ವಾಹನಗಳ ಮೇಲೆ ಕ್ರಮ ಕೈಗೊಳ್ಳಲು ವಾಹನ ನೋಂದಣಿ ಗುರುತಿಸುವ ಸ್ವಯಂಚಾಲಿತ ಎ.ಎನ್.ಪಿ,ಆರ್ (ANPR) ಕ್ಯಾಮರಾ ಅಳವಡಿಸಲು ಸೂಚಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.
ನಗರದ ಹೊರವಲಯದ ಚಿಕ್ಕತುಮಕೂರು ಬಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ನಡೆದ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಹೆದ್ದಾರಿಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇವುಗಳನ್ನು ನಿಯಂತ್ರಿಸಲು ಹೆದ್ದಾರಿ ಪ್ರಾಕಾರ ಹಾಗೂ ಪೊಲೀಸ್ ಇಲಾಖೆ ಸಹಯೋಗ ಅಗತ್ಯವಾಗಿದೆ.
ಹೆದ್ದಾರಿಗಳಲ್ಲಿ ಬ್ಲಾಕ್ ಸ್ಪಾಟ್ ಸ್ಥಳಗಳನ್ನು ಗುರುತಿಸಲಾಗಿದೆ. ಅಂಡರ್ ಪಾಸ್ ಅಗತ್ಯವಿರುವ ಕಡೆ ನಿರ್ಮಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಹೆದ್ದಾರಿಗಳಲ್ಲಿ ಏಕಮುಖ ಸಂಚಾರ ಮಾಡುವುದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ವಾಹನ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಿದೆ ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ತಾ.ಪಂ ಇ.ಓ ಮುನಿರಾಜು, ಡಿವೈಎಸ್‍ಪಿ ರವಿ, ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಸಾಧಿಕ್ ಪಾಷಾ ಹಾಜರಿದ್ದರು.