ಬೆಂಗಳೂರು: ನಿನ್ನೆಯಷ್ಟೇ ‘ಪೈಲ್ವಾನ್’ ಸಿನಿಮಾ ಅದ್ಬುತ ನಟನೆಯ ಕಾರಣ ತಮಗೆ ಘೋಷಣೆಯಾಗಿದ್ದ 2019ನೇ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಲು ನಟ ಕಿಚ್ಚ ಸುದೀಪ್ (Sudeep) ನಿರಾಕರಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅರ್ಹ ಬೇರೊಬ್ಬ ನಟನಿಗೆ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರವನ್ನು ಮನವಿ ಮಾಡಿದ್ದಾರೆ.
ಸುದೀಪ್ ಟ್ವಿಟ್: ಗೌರವಾನ್ವಿತ ಕರ್ನಾಟಕ ಸರ್ಕಾರ ಮತ್ತು ತೀರ್ಪುಗಾರರ ಸಮಿತಿಗೆ.
ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸುವುದು ನಿಜವಾಗಿಯೂ ಸೌಭಾಗ್ಯವೇ ಸರಿ. ಈ ಗೌರವ ನೀಡಿದ ತೀರ್ಪುಗಾರರಿಗೆ ನಾನು ಹೃದಯಸ್ಪರ್ಶಿ ಧನ್ಯವಾದಗಳನ್ನು ಹೇಳುತ್ತೇನೆ.
ನನ್ನ ಹಲವು ವೈಯಕ್ತಿಕ ಕಾರಣಗಳಿಂದ ಕೆಲ ವರ್ಷಗಳಿಂದ ನಾನು ಪ್ರಶಸ್ತಿ ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ ಎಂಬ ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸಲೇಬೇಕಿದೆ.
ಆ ನಿರ್ಧಾರವನ್ನು ಮುಂದುವರಿಸಲು ಬದ್ಧನಾಗಿದ್ದೇನೆ. ಈ ಪ್ರಶಸ್ತಿಗೆ ಬಹಳಷ್ಟು ಅರ್ಹ ವ್ಯಕ್ತಿಗಳು ಇದ್ದಾರೆ.
ಈ ಪ್ರತಿಷ್ಠಿತ ಮನ್ನಣೆಯನ್ನು ಅವರಲ್ಲಿ ಒಬ್ಬರು ಸ್ವೀಕರಿಸುವುದನ್ನು ನೋಡುವುದು ನನಗೆ ಹೆಚ್ಚು ಸಂತೋಷವನ್ನು ನೀಡುತ್ತದೆ ಎಂದು ಬರೆದಿದ್ದಾರೆ.