ಬೆಂಗಳೂರು: ಹೈಕಮಾಂಡ್‌ನ ಒಂದು ಗುಟುರಿನಿಂದ ಕಾಂಗ್ರೆಸಿನ ಹುದ್ದೆ ಗುದ್ದಾಟ ತಣ್ಣಗಾಗಿದ್ದರೆ, ಇತ್ತ ಬಿಜೆಪಿ (BJP) ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ರಾಜ್ಯಕ್ಕೆ ಬಂದು ಬಣ ಬಡಿದಾಟವನ್ನು ಶಮನ ಮಾಡುವ ಬದಲು, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾಡಿರುವ ಕಾರಣ ಕಮಲ ಕಲಿಗಳು ಮತ್ತೊಂದು ಹಂತದ ಕೆಸರೆರಚಾಟ ಆರಂಭಿಸಿದ್ದಾರೆ.
ವಿಜಯೇಂದ್ರ ವರ್ಸಸ್ ಯತ್ನಾಳ್ ಕಚ್ಚಾಟದ ಮಧ್ಯೆ ರೆಡ್ಡಿ ವರ್ಸಸ್ ರಾಮುಲು ಫೈಟ್ ಆರಂಭವಾಗಿದ್ದು ಹೈಕಮಾಂಡ್‌ಗೆ ಹೊಸ ತಲೆನೋವು ಆರಂಭವಾಗಿದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರೆಬೆಲ್ ರಾಮುಲು, ಸಿಟಿ ರವಿ ಅವರ ಅಸಮಧಾನ ಸ್ಫೋಟವಾಗಿದೆ.
ರೆಡ್ಡಿ ವರ್ಸಸ್ ರಾಮುಲು
ಒಂದು ಕಾಲದಲ್ಲಿ ಆಪ್ತರಾಗಿದ್ದ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಈಗ ಪರಸ್ಪರ ಕಚ್ಚಾಡುತ್ತಿದ್ದಾರಲ್ಲದೆ ಪಕ್ಷ ಬಿಡುವ ಮಾತನ್ನೂ ಶ್ರೀರಾಮುಲು ಆಡಿರು ವುದು ಮತ್ತೊಂದು ಬಣ ಬಡಿದಾಟ ಆರಂಭವಾಗಿದೆ.
ಮಾಜಿ ಸಚಿವ ಶ್ರೀರಾಮುಲು ಆಕ್ರೋಶ ಗೊಂಡಿದ್ದು, ಬಿಜೆಪಿ ತೊರೆಯುವ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾಗಿರುವುದೇ ಮಂಗಳವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ.
ಬಳ್ಳಾರಿ ಯಲ್ಲಿ ಸಾಲು ಸಾಲು ಚುನಾವಣೆಯಲ್ಲಿ ಸೋತಿರುವುದಕ್ಕೆ ರಾಮುಲು ಅವರನ್ನು ಹೊಣೆ ಮಾಡಲಾಗಿತ್ತು. ಇದಕ್ಕೆ ಸಿಡಿದೆದ್ದ ರಾಮುಲು, ರೆಡ್ಡಿ ವಿರುದ್ದವೂ ತಿರುಗಿ ಬಿದ್ದಿದ್ದಾರೆ. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ‘ನಾನು ಬೇಡವಾದರೆ ಹೇಳಿ ಪಕ್ಷ ಬಿಡಲು ಸಿದ್ದನಿದ್ದೇನೆ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂದು ಹೇಳಿರುವ ಶ್ರೀರಾಮುಲು, ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.
ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ತಾವು ಹೇಳಿದ್ದೇ ನಡೆಯಬೇಕು, ನಾನು ಹೇಳಿದವರೇ ಗೆಲ್ಲಬೇಕು ಎಂದು ಇಲ್ಲಿಂದ ದೆಹಲಿವರೆಗೆ ಏನೇನೋ ಸುಳ್ಳು ಹೇಳಿ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ.
ನಾನು ಜನಾರ್ದನ ರೆಡ್ಡಿ ವಿರುದ್ಧ ಯಾವತ್ತೂ ನಡೆದುಕೊಂಡಿಲ್ಲ. ಅವರು ಪಕ್ಷಕ್ಕೆ ಮತ್ತೆ ಬರುತ್ತೇನೆ ಎಂದಾಗ, ಅವರನ್ನು ಕರೆದುಕೊಳ್ಳಲು ನಾನೇ ಹೇಳಿದ್ದೆ. ಆದರೆ, ಈಗ ನನ್ನ ವಿರುದ್ಧವೇ ಅಪಪ್ರಚಾರ ಮಾಡಿಸುತ್ತಿದ್ದಾರೆ ಎಂದು ಎಂದು ಒಂದು ಕಾಲದ ತಮ್ಮ ಆಪ್ತ ಸ್ನೇಹಿತನ ವಿರುದ್ದವೇ ಶ್ರೀರಾಮುಲು ಕಿಡಿಕಾರಿದ್ದಾರೆ.
ವಿಜಯೇಂದ್ರ ವಿರುದ್ದ ಅಶ್ವತ್ಥ ನಾರಾಯಣ ಗರಂ
ಕೋರ್ ಕಮಿಟಿ ಸಭೆಯಲ್ಲಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರ ನೇಮಕ ಸಂಬಂಧ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ನಡುವೆ ಬಿರುಸಿನ ಮಾತಾಗಿದೆ ಎಂದು ವರದಿಯಾಗಿದೆ.
ಬೆಂಗಳೂರು ಉತ್ತರಕ್ಕೆ ಅಧ್ಯಕ್ಷರ ಬದಲಾವಣೆಗೆ ಅಶ್ವತ್ಥ ನಾರಾಯಣ ಸೂಚಿಸಿದ್ದಾರೆ. ಆದರೆ, ಹಳಬರನ್ನು ಮುಂದುವರಿ ಸಲು ವಿಜಯೇಂದ್ರ ಒಲವು ತೋರಿದ್ದಾರೆ ಎನ್ನಲಾಗಿದೆ. ಈ ವೇಳೆಯಲ್ಲಿ ಹೊಸಬರನ್ನು ನೇಮಕ ಮಾಡುವಂತೆ ಅಶ್ವತ್ಥ ನಾರಾಯಣ ಪಟ್ಟು ಹಿಡಿದಿದ್ದಾರೆ.
ಈ ವಿಚಾರವಾಗಿ ವಾಗ್ಯುದ್ದ ನಡೆಯುತ್ತಿದ್ದಾಗ, ಈ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಸಿಟಿ ರವಿಗೆ ವಾರ್ನಿಂಗ್
ಮತ್ತೊಂದೆಡೆ ಸಿಟಿ ರವಿ ಕುರಿತು, “ನೀವು ಅಸೆಂಬ್ಲಿ ಚುನಾವಣೆಯಲ್ಲಿ ಸೋತರೂ ನಿಮ್ಮನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಲಾಗಿದೆ. ಆದರೆ ಪ್ರತಿಪಕ್ಷದ ನಾಯಕನ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಭಿನ್ನಮತೀಯರ ಜತೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದೀರಿ.
ಮೋದಿ ನಂತರ ಯೋಗಿ ಪ್ರಧಾನಿ ಆಗುತ್ತಾರೆ ಎಂದು ಹೇಳಿದ್ದೀರಿ. ಮೋದಿ ಪ್ರಧಾನಿ ಇರುವಾಗಲೇ ಹೀಗೆ ಹೇಳುವುದು ಸರಿಯಲ್ಲ,” ಎಂದು ಅಗರ್‌ವಾಲ್ ಅವರು ಸಿ.ಟಿ.ರವಿ ಅವರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಇದಕ್ಕೆ ಸಮಜಾಯಿಷಿ ನೀಡಿದ ರವಿ, “ನಾನು ಎಲ್ಲೂ ಯೋಗಿ ಬಗ್ಗೆ ಹೇಳಿಕೆ ನೀಡಿಲ್ಲ. ದಾಖಲೆ ಇದ್ದರೆ ತೋರಿಸಿ,” ಎನ್ನಲು ಮುಂದಾದಾಗ, “ನಾನು ಸಾಕ್ಷಿ ನಿಮಗೆ ತೋರಿಸಬೇಕಿಲ್ಲ. ನನ್ನ ಬಳಿ ಮಾಹಿತಿ ಇದೆ. ಉಸ್ತುವಾರಿಯಾಗಿ ಹೇಗೆ ಕೆಲಸ ಮಾಡಬೇಕೆಂಬುದು ನನಗೆ ಗೊತ್ತಿದೆ.” ಎಂದು ಬೇಕಾಬಿಟ್ಟಿ ಮಾತನಾಡಿದ್ದಾರೆ ಎನ್ನಲಾಗಿದೆ.
ರಾತ್ರೋ ರಾತ್ರಿ ಹಿರಿಯರ ಸಭೆ
ಈ ಎಲ್ಲದರ ನಡುಗೆ ಬುಧವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಮನೆಯಲ್ಲಿ ಹಿರಿಯ ನಾಯಕರಾದ ಆರ್.ಅಶೋಕ, ಬಸವರಾಜ ಬೊಮ್ಮಾಯಿ, ಸಿಟಿ ರವಿ, ಅಶ್ವಥ್ ನಾರಾಯಣ್ ಅವರುಗಳು ಸಭೆ ನಡೆಸಿದ್ದು ಮತ್ತೊಂದು ಆತಂಕ ಸೃಷ್ಟಿಸಿದೆ.
ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಸಂಸದ ಬಸವರಾಜ ಬೊಮ್ಮಾಯಿ, ಮಂಡಳ ಹಾಗೂ ಜಿಲ್ಲಾಮಟ್ಟದ ಅಧ್ಯಕ್ಷರ ನೇಮಕ ಕುರಿತು ಈಗಾಗಲೇ ಜಿಲ್ಲಾ ಮಟ್ಟದ ನಾಯಕರೊಂದಿಗೆ ಭೇಟಿ ಮಾಡಿ ಒಂದು ಹಂತದ ಚರ್ಚೆ ಮಾಡಿ ಬಂದಿದ್ದಾರೆ. ಅದರ ಮುಂದುವರೆದ ಭಾಗವಾಗಿ ನಾವು ಎಲ್ಲ ಜಿಲ್ಲಾ ನಾಯಕರ ಜೊತೆ ಚರ್ಚೆ ಮಾಡುವ ಸಲುವಾಗಿ ನಾವು ಸೇರಿದ್ದೇವು ಎಂದು ತಿಳಿಸಿದರು.
ಇನ್ನೊಂದು ರಾಜ್ಯದಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಕಟ್ಟಲು ನಾವು ಬದ್ದರಾಗಿರುವವರು, ನಾವು ಬಿಜೆಪಿ ಪರವಾಗಿರುವವರು, ಬಿಜೆಪಿಯನ್ನ ಶಕ್ತಿಯುತವಾಗಿ ಕಟ್ಟುವ ಸಲುವಾಗಿ ಒಗ್ಗಟ್ಟಿನಿಂದ ಸಾಗುತ್ತೇವೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು.
ಕೋರ್ ಕಮಿಟಿಯಲ್ಲಿ ಯಾರಿಗೂ ಯಾರೂ ವಾರ್ನಿಂಗ್ ಮಾಡಿಲ್ಲ, ಹಲವು ವಿಚಾರಗಳು ಸೌಹರ್ದಯುತವಾಗಿ ಚರ್ಚೆ ಆಗಿದೆ. ಎಲ್ಲವನ್ನು ಬಗೆ ಹರಿಸಲಾಗುವುದು ಎಂದು ತೇಪೆ ಹಚ್ಚಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಪಟ್ಟು ಹಾಗೂ ಚುನಾವಣಾ ಪ್ರಕ್ರಿಯೆಯ ಕೂಗು ಮಂದುವರಿದಿದೆ. ರಾಜ್ಯ ಉಸ್ತುವಾರಿ ಬಂದು ಇಲ್ಲಿ ಏನೇ ಸರಿದೂಗಿಸಲು ಬಂದರು, ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಅಲ್ಲದೆ ಉಸ್ತುವಾರಿ ಬಗ್ಗೆಯೇ ವರಿಷ್ಠರಿಗೆ ದೂರು ನೀಡಲು ಮತ್ತೊಂದು ಬಣ ಸಿದ್ದವಾಗಿದ್ದು, ಒಟ್ಟಾರೆ ಬಿಜೆಪಿಯಲ್ಲಿ ಒಳಬೇಗುದಿ ಶಮನವಾಗುವ ಲಕ್ಷಣ ಕಾಣುತ್ತಿಲ್ಲ.