ದೊಡ್ಡಬಳ್ಳಾಪುರ (Doddaballapura): ಮಜರಾಹೊಸಹಳ್ಳಿ, ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಹರಿದು ಬರುತ್ತಿರುವ ಕಲುಷಿತ ನೀರು ನಿಲ್ಲಿಸುವಂತೆ ಹಾಗೂ ಕುಡಿಯಲು ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಜ.26 ರಂದು ಗಣರಾಜ್ಯೋತ್ಸವ ದಿನ ಗ್ರಾಮಗಳಲ್ಲಿನ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲು ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಸಮಿತಿಯ ನಿರ್ಧರಿಸಿದೆ.
ಸಮಿತಿಯ ಈ ನಿರ್ಧಾರಕ್ಕೆ ಮಣಿದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಜ.23 ರಂದು ಬೆಳಿಗ್ಗೆ 11.30ಕ್ಕೆ ಎರಡು ಗ್ರಾಮ ಪಂಚಾಯಿತಿಗಳ ಜನರನ್ನು ಒಳಗೊಂಡ ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಸಮಿತಿ ಸದಸ್ಯರೊಂದಿಗ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದಾರೆ.
ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತಿದ್ದಾರೆ.
ಸಭೆಯಲ್ಲಿ ಈ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಹಾಗೂ ಕಲುಷಿತ ನೀರು ಕೆರೆಗಳಿಗೆ ಹರಿದು ಬರುವುದನ್ನು ತಡೆಯಲು ಕೈಗೊಂಡಿರುವ ಪರಿಹಾರಾತ್ಮಕ ಕ್ರಮಗಳ ಮಾಹಿತಿ ನೀಡಲಿದ್ದಾರೆ.