Daily story: ಒಬ್ಬ ತಂದೆಗೆ ಒಬ್ಬನೇ ಮುದ್ದಿನ ಮಗನಿದ್ದ. ಮಗನಿಗೆ ಬೇಕಾದಷ್ಟು ಆಸ್ತಿ ಮಾಡಿದ್ದ. ಆತ ಸಂಪಾದನೆ ಮಾಡುವ ಅಗತ್ಯವಿರಲಿಲ್ಲ. ಅವನಿಗೆ ಹೇಳಿಕೊಳ್ಳುವಂತಹ ವಿದ್ಯೆ, ಕೆಲಸ ಇರಲಿಲ್ಲ. ಹೀಗಾಗಿ ಸೋಮಾರಿಯಾಗಿ ಬೆಳೆದ.
ಅವನು ಕೇಳುವುದು ಹೆಚ್ಚೊ, ಕೊಡಿಸುವುದು ಹೆಚ್ಚೊ, ಎಂಬಂತೆ, ಬಾಯಲ್ಲಿ ಬರುತ್ತಿದ್ದ ಹಾಗೆ ಎಲ್ಲವೂ ಅವನ ಕಣ್ಣು ಮುಂದೆ ಇರುತ್ತಿತ್ತು. ಇದೇ ಅವನ ಅಭ್ಯಾಸವಾಗಿತ್ತು. ಸಿಗದಿದ್ದರೆ ವಿಪರೀತ ಸಿಟ್ಟು ಮಾಡಿಕೊಳ್ಳುತ್ತಿದ್ದ. ಏನೂ ಮಾಡದೆ ಉಂಡಾಡಿ ಗುಂಡನ ಹಾಗೆ ಇರುತ್ತಿದ್ದ.
ಒಂದು ದಿನ ಯಾರೋ ಒಬ್ಬರು ಇವನನ್ನು ತಮಾಷೆ ಮಾಡಬೇಕೆಂದು, ನಿಮ್ಮ ಹೆಂಡತಿ ಉದ್ಯಾನವನದಲ್ಲಿ ಅವಳ ಪ್ರಿಯಕರನೊಡನೆ ಸಲ್ಲಾಪ ನಡೆಸುತ್ತಿದ್ದಾಳೆ. ನೀವಿಲ್ಲಿ ಸುಮ್ಮನೆ ಕುಳಿತಿದ್ದೀರಲ್ಲ ಎಂದರು.
ಇವನಿಗೆ ಸಿಟ್ಟು ಬಂತು. ತಕ್ಷಣ ಕೈಯಲ್ಲಿ ಬಂದೂಕು ಹಿಡಿದು ಉದ್ಯಾನವನದ ಕಡೆ ಹೊರಟ ಉದ್ಯಾನವನವೆಲ್ಲಾ ಹುಡುಕಿದ. ಅಲ್ಲೆಲ್ಲೋ ಇವನ ಹೆಂಡತಿ ಅವಳ ಪ್ರೇಮಿ ಕಾಣಿಸಲಿಲ್ಲ. ರೊಚ್ಚಿಗೆದ್ದು ಎಲ್ಲಾ ಕಡೆ ಹುಡುಕಾಡುತ್ತಿದ್ದ.
ಆಗ ಇವನ ಕುಟುಂಬಕ್ಕೆ ಹತ್ತಿರವಾದ ಹಿರಿಯರೊಬ್ಬರು ಈತನನ್ನು ಕಂಡು ಯಾಕೋ ಕೈಯಲ್ಲಿ ಕೋವಿ ಹಿಡಿದು ಏನು ಹುಡುಕುತ್ತಿದ್ದಿ…? ಎಂದು ಕೇಳಿದರು.
ನನ್ನ ಹೆಂಡತಿ ಇಲ್ಲಿ ಅವಳ ಪ್ರೇಮಿಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದಾಳೆಂದು ಯಾರೋ ತಿಳಿಸಿದರು. ಅವಳನ್ನು ಹಾಗೂ ಅವಳ ಪ್ರೇಮಿಯನ್ನು ಹುಡುಕುತ್ತಿದ್ದೇನೆ ಸಿಕ್ಕರೆ ಇಬ್ಬರನ್ನು ಅಲ್ಲಿಯೇ ಸುಟ್ಟು ಹಾಕುತ್ತೇನೆ ಎಂದು ಬುಸುಗುಟ್ಟುತ್ತ ಹೇಳಿದ.
ಆ ಹಿರಿಯರು ಆಶ್ಚರ್ಯದಿಂದ ಅರೆ ನಿನಗೆ ಯಾವಾಗ ಮದುವೆಯಾಯಿತು..? ನಿನ್ನ ಹೆಂಡತಿ ಯಾರು.? ಎಂದು ಕೇಳಿದರು. ಅವನಿಗೆ ಇನ್ನೂ ಮದುವೆಯಾಗಿರಲಿಲ್ಲ. ಮುಂಗೋಪದಲ್ಲಿ ಪ್ರಜ್ಞೆ ಕಳೆದುಕೊಂಡ ಅರಿವಾಯಿತು ಬಂದೂಕನ್ನು ತೆಗೆದುಕೊಂಡು ಮನೆಗೆ ಮರಳಿದ.
ಉಪನ್ಯಾಸದಲ್ಲಿ ಇಂತಹ ಕಥೆಯನ್ನು ಕೇಳಿದ ಭಕ್ತರೊಬ್ಬರು ಗುರುಗಳೇ, ನನಗೂ ಹೀಗೆ ಸಿಟ್ಟು ಬರುತ್ತದೆ. ನನ್ನಿಂದ ಮಾಡಬಾರದ್ದನ್ನೆಲ್ಲ ಮಾಡಿಸುತ್ತದೆ. ನನಗೇನಾದರೂ ಒಂದು ಮಾರ್ಗ ತೋರಿಸಿ ಗುರೂಜಿ ಎಂದು ಕೇಳಿದರು.
ಆಗ ಗುರುಗಳು ಸ್ವಯಂ ನಿಯಂತ್ರಣ ಅಥವಾ ಮನೋವೈದ್ಯರ ಹತ್ತಿರ ಸಲಹೆ ಪಡೆಯಲು ತಿಳಿಸಿದರು.
ಆಗ ಭಕ್ತರು ಸ್ವಯಂ ನಿಯಂತ್ರಣ ನನ್ನಿಂದ ಆಗದ ಕೆಲಸ ಮತ್ತು ನಮ್ಮ ಮನೋವೈದ್ಯರಿಗೆ ನನಗಿಂತ ಸಿಟ್ಟು ಜಾಸ್ತಿ. ಅವರೂ ಪ್ರಯೋಜನವಿಲ್ಲ ನೀವೇ ಏನಾದರೂ ಮಂತ್ರ, ತಂತ್ರ ಮಾಡಿಕೊಡಬೇಕು ಎಂದು ಪ್ರಾರ್ಥಿಸಿದರು.
ಗುರುಗಳು ಎಷ್ಟೇ ಸಲಹೆ ಉಪಾಯಗಳನ್ನು ಹೇಳಿದರೂ ಕೇಳಲಿಲ್ಲ. ಆಗ ಗುರುಗಳು ಯೋಚನೆ ಮಾಡಿ ಭಕ್ತನ ಕೈಯಲ್ಲಿದ್ದ ಉಂಗುರವನ್ನು ಕೇಳಿ ಪಡೆದುಕೊಂಡು, ತಮ್ಮ ಬಲ ಮುಷ್ಟಿಯಲ್ಲಿ ಇಟ್ಟುಕೊಂಡು ಕಣ್ಣು ಮುಚ್ಚಿ ಕೆಲ ನಿಮಿಷ ಧ್ಯಾನಸ್ಥರಾಗಿ ನಂತರ ಉಂಗುರವನ್ನು ಭಕ್ತನಿಗೆ ಕೊಟ್ಟು ಇದನ್ನು ಮಂತ್ರಿಸಿ ಕೊಟ್ಟಿದ್ದೇನೆ.
ನಿಮ್ಮ ದೇವರ ಮನೆಯಲ್ಲಿ ಇಡು, ನಿನಗೆ ಯಾವಾಗ ಸಿಟ್ಟುಬಂದರೂ ದೇವರ ಮನೆಗೆ ಹೋಗಿ ಉಂಗುರಕ್ಕೆ ಹನ್ನೊಂದು ಸಾರಿ ಸುತ್ತು ಪ್ರದಕ್ಷಣೆ ನಮಸ್ಕಾರ ಮಾಡು. ಆಗ ಈ ಉಂಗುರವು ನಿನ್ನ ಕೋಪ ತಾಪದಿಂದ ಆಗುವ ಅನಾಹುತಗಳನ್ನು ತಪ್ಪಿಸುತ್ತದೆ ಎಂದು ಹೇಳಿ ಕಳುಹಿಸಿದರು. ಭಕ್ತನು ಸಂತೋಷದಿಂದ ಉಂಗುರ ತೆಗೆದುಕೊಂಡು ಹೋದನು.
ಇದನ್ನೆಲ್ಲಾ ನೋಡುತ್ತಿದ್ದ ಮತ್ತೊಬ್ಬ ಭಕ್ತನು ಎದ್ದು ಬಂದು, ಮಂತ್ರಿಸಿದ ಉಂಗುರಕ್ಕೆ ಹನ್ನೊಂದು ಸಾರಿ ನಮಸ್ಕಾರ ಹಾಕಿದರೆ ಅನಾಹುತ ತಪ್ಪುತ್ತದೆಯೇ..? ಎಂದು ಕೇಳಿದಾಗ, ಗುರುಗಳು ಹೇಳಿದರು, ಸಿಟ್ಟು ಬಂದಾಗ ಆತ ದೇವರ ಮನೆಗೆ ಹೋಗಿ ಉಂಗುರವನ್ನು ತೆಗೆದು ಅದಕ್ಕೆ ಹನ್ನೂಂದು ಸಾರಿ ನಮಸ್ಕಾರ ಮಾಡಿ ಹಿಂತಿರುಗಿ ಬರಲು 10-15 ನಿಮಿಷ ಬೇಕಾಗುತ್ತದೆ. ಅಷ್ಟರಲ್ಲಿ ಆತನ ಕೋಪದ ತೀವ್ರತೆ ಸಹಜವಾಗಿ ಕಮ್ಮಿಯಾಗಿರುತ್ತೆ. ಆಗ ಆತನಿಂದ ಆಗುವ ಅನಾಹುತ ತಪ್ಪುತ್ತದೆ.
ಇದರಲ್ಲಿ ಯಾವ ಮಂತ್ರ ತಂತ್ರ ಇಲ್ಲ ಎಂದರು. ಯಾವುದೇ ವ್ಯಕ್ತಿ ಸಿಟ್ಟು ಬಂದಾಗ ಐದು ನಿಮಿಷ ಒಂದೇ ಕಡೆ ಸುಮ್ಮನೆ ಕುಳಿತು ಯೋಚಿಸಿ ಕೆಲಸ ಮಾಡಿದರೆ ಯಾವ ಮಂತ್ರ ತಂತ್ರದ ಉಂಗುರವು ಬೇಡ. ಇನ್ನೊಬ್ಬರನ್ನು ಕೇಳುವ ಅಗತ್ಯವೂ ಇರುವುದಿಲ್ಲ.
ಕೃಪೆ: ಆಶಾ ನಾಗಭೂಷಣ. (ಸಾಮಾಜಿಕ ಜಾಲತಾಣ)