ನವದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರವಾಲ್ ಮೇಲೆ ಬಿಜೆಪಿಯ (BJP) ಪರ್ವೇಶ್ ವರ್ಮಾ ಅವರ ಬೆಂಬಲಿಗರು ದಾಳಿ ಮಾಡಿದ್ದಾರೆ ಎಂದು ಎಎಪಿ (AAP) ಆರೋಪಿಸಿದೆ.
ಈ ಕುರಿತು ಟ್ವಿಟ್ ಮಾಡಿರುವ AAP, ಸೋಲಿನ ಭಯದಿಂದ ಗಾಬರಿಗೊಂಡ ಬಿಜೆಪಿ, ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ಮಾಡಲು ಗೂಂಡಾಗಳು ಮುಂದಾದರು.
ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಅವರ ಗೂಂಡಾಗಳು ಅರವಿಂದ್ ಕೇಜ್ರಿವಾಲ್ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿ, ಪ್ರಚಾರ ಮಾಡದಂತೆ ಗಾಯಗೊಳಿಸಿದರು.
ಬಿಜೆಪಿಯವರೇ, ಕೇಜ್ರಿವಾಲ್ ಜೀ ನಿಮ್ಮ ಹೇಡಿತನದ ದಾಳಿಗೆ ಹೆದರುವುದಿಲ್ಲ, ದೆಹಲಿಯ ಜನರು ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂದಿದೆ.
ಆದರೆ ವರ್ಮಾ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕೇಜ್ರಿವಾಲ್ ಅವರ ಕಾರು ಬಿಜೆಪಿ ಕಾರ್ಯಕರ್ತನ ಮೇಲೆ ಹರಿದಿದ್ದು, ಆತನ ಕಾಲು ಮುರಿದಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಇದು ತುಂಬಾ ನಾಚಿಕೆಗೇಡಿನ ಸಂಗತಿ. ನಾನು ಆತನ ಆರೋಗ್ಯ ವಿಚಾರಿಸಲು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ಹೋಗುತ್ತಿದ್ದೇನೆ ಎಂದು ವರ್ಮಾ ಹೇಳಿದ್ದಾರೆ.
ಆದರೆ ವಿಡಿಯೋ ಮೂಲಕ ತಿರುಗೇಟು ನೀಡಿರುವ ಎಎಪಿ, ಈ ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿ. ಪ್ರತಿ ಬಾರಿಯಂತೆ ಈ ಬಾರಿಯೂ ಕೇಜ್ರಿವಾಲ್ ಜಿ ಮೇಲೆ ಮಾರಣಾಂತಿಕ ದಾಳಿ ನಡೆಸಿದವನೇ ಬಿಜೆಪಿ ಗೂಂಡಾ.
ಬಿಜೆಪಿಯ ಪ್ರವೇಶ್ ವರ್ಮಾ ಅವರ ಪ್ರಚೋದನೆಯ ಮೇರೆಗೆ ಈ ಗೂಂಡಾ ಈ ಕೃತ್ಯ ಎಸಗಿದ್ದಾನೆ ಎಂಬುದು ಈ ವಿಡಿಯೋದಿಂದ ಸಾಬೀತಾಗಿದೆ.
ಸೋಲು ಕಂಡು ಹತಾಶರಾಗಿರುವ ಬಿಜೆಪಿ, ಕೇಜ್ರಿವಾಲ್‌ರನ್ನು ಮಟ್ಟ ಹಾಕಲು ಯತ್ನಿಸುತ್ತಿದೆ ಎಂದಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಪರ್ವೇಶ್ ವರ್ಮಾ ಅವರು ಕೇಜ್ರವಾಲ್ ವಿರುದ್ಧ ಸ್ಪರ್ಧಿಸುತ್ತಿದ್ದು ಆರೋಪ, ಪ್ರತ್ಯಾರೋಪ ತೀವ್ರವಾಗಿದೆ.