ಮೈಸೂರು: ಮೈಸೂರು -ಕೊಡಗು ಸಂಸದನಾಗಿ ಅತಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿ, ಜನಮನ್ನಣೆ ಪಡೆದಿದ್ದ ಪತ್ರಕರ್ತ ಪ್ರತಾಪ್ ಸಿಂಹ (Pratap simha) ಅವರಿಗೆ, ಮುಂದಿನ ದಿನಗಳಲ್ಲಿ ಕೆಲವರ ಉನ್ನತ ಸ್ಥಾನಕ್ಕೆ ಅಡ್ಡಿಯಾಗಬಹುದೆಂದು ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲಾಯಿತು ಎಂಬ ಆಕ್ರೋಶದ ಮಾತುಗಳು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರದ್ದಾಗಿದೆ.
ಇದರಿಂದ ಸಹಜವಾಗಿ ಕೆರಳಿದ ಸಿಂಹ, ಯತ್ನಾಳ್ ಬಣದಲ್ಲಿ ಸೇರಿಕೊಂಡು, ರಾಜ್ಯ ಬಿಜೆಪಿಯಲ್ಲಿ ಪಕ್ಷ ನಿಷ್ಠರು, ಅರ್ಹತೆ ಇದ್ದವರನ್ನು ಮೂಲೆಗುಂಪು ಮಾಡುತ್ತಿರುವ ಬೆಳವಣಿಗೆಯನ್ನು ಖಂಡಿಸಿದ್ದರು.
ಇದರ ಬೆನ್ನಲ್ಲೇ ಮೈಸೂರು ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ನಾಮಕರಣ ವಿಚಾರವಾಗಿ, ಸಿದ್ದರಾಮಯ್ಯ ಅವರು ಮೈಸೂರಿಗೆ ನೀಡಿರುವ ಕೊಡುಗೆ ನೆನಪಿಸಿ, ಅವರ ಹೆಸರು ಇಟ್ಟರೆ ತಪ್ಪಿಲ್ಲವೆಂದಿದ್ದರು. ಇದನ್ನೆ ದೊಡ್ಡದಾಗಿ ಬಿಂಬಿಸುತ್ತಿರುವ ಸ್ವಪಕ್ಷಿಯರು, ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜ ಕ್ಷೇತ್ರದ ನಿಕಟ ಪೂರ್ವ ಉಪಾಧ್ಯಕ್ಷ ಕುಮಾರ್ ಗೌಡ, ಪರಿಶಿಷ್ಟ ಪಂಗಡಗಳ ಮೋರ್ಚಾದ ಮಾಜಿ ಅಧ್ಯಕ್ಷ ಮೈಕಾ ಪ್ರೇಮ್ ಅವರು ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು. ಈ ಮೂಲಕ ಮಾಜಿ ಸಂಸದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪ್ರತಾಪ್ ಸಿಂಹ ಹಾಲಿ ಸಂಸದರಿಗೆ ಮುಜುಗರ ತರುವ ಕೆಲಸ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿಲ್ಲ. ಕೇವಲ ವರುಣ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿ ಸೋಲಿಗೆ ಕಾರಣರಾದರು ಎಂದು ಆರೋಪಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ವಕ್ಫ್ ವಿಚಾರದಲ್ಲಿಯೂ ಪಕ್ಷದ ಬ್ಯಾನರ್ ಅಡಿಯಲ್ಲಿ ಹೋರಾಟ ಮಾಡದೆ ವಿಜಯೇಂದ್ರ ಅವರಿಗೆ ಮುಜುಗರ ತರುವ ಕೆಲಸ ಮಾಡಿದ್ರು ಎಂದು ಕಿಡಿಕಾರಿದ್ದು, ಇನ್ನೂ ಅನೇಕ ಕಾರಣ ನೀಡಿ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ಬಿಜೆಪಿ ಬಣ ಬಡಿದಾಟ ವಿಜಯೇಂದ್ರ ಇಂದು ಖಾಸಗಿ ಹೋಟೆಲ್ನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದರೆ, ಕೆಲವರು ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡ ಪ್ರತಾಪ್ ಸಿಂಹರಂತ ನಿಷ್ಠಾವಂತರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿಸಲು ಪತ್ರ ಬರೆದಿದ್ದಾರೆ.