ತಿಪಟೂರು: ಸಾಲ ಕಟ್ಟುವಂತೆ ಮೈಕ್ರೋ ಫೈನಾನ್ಸ್ನ ಸಿಬ್ಬಂದಿಯಿಂದ ಹೆಚ್ಚು ಒತ್ತಡ ಹಾಕಿದ್ದಕ್ಕೆ ಮನನೊಂದ ಮಹಿಳೆಯೋರ್ವರು ವಿಡಿಯೋ ಮಾಡಿಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಡೆದಿದೆ.
ಗಾಂಧಿ ನಗರದ ಬೋವಿ ಕಾಲೋನಿಯ ನಿವಾಸಿ ಸಾಧಿಕ ಬೇಗಂ (42 ವರ್ಷ) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ.
ಮೈಕ್ರೋ ಫೈನಾನ್ಸ್ನ ಸಿಬ್ಬಂದಿ ಸಾಲ ಕಟ್ಟುವಂತೆ ಹೆಚ್ಚು ಒತ್ತಡ ಹಾಕಿದ್ದರು. ಈ ಬಗ್ಗೆ ಹಾಸನದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಸಯಿದಾ ನಯಾಜ್ ಬಳಿ ಹೇಳಿಕೊಂಡಿದ್ದರಂತೆ.
ಪತಿ ಕೂಡ ತನ್ನ ಪತ್ನಿಗೆ ಧೈರ್ಯವಾಗಿ ಇರು, ಬಂದು ಸಾಲವನ್ನು ಕಟ್ಟುತ್ತೇನೆ ಎಂದು ಹೇಳಿದ್ದರು. ಆದರೆ, ಕಳೆದ ಸೋಮವಾರ ಮೈಕ್ರೋ ಫೈನಾನ್ಸ್ನ ಸಿಬ್ಬಂದಿಯಿಂದ ಒತ್ತಡ ಹೆಚ್ಚಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತ ಮನೆಗೆ ಬಂದ ಪತಿ ತನ್ನ ಪತ್ನಿ ಕಾಣದಿದ್ದಕ್ಕೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಹುಡುಕಾಟ ನಡೆಸಿದ ಪೊಲೀಸರಿಗೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಬಳಿಯ ಕಲ್ಲುಶೆಟ್ಟಿಹಳ್ಳಿ ಬಳಿ ಮಹಿಳೆಯ ಶವ ಪತ್ತೆ ಆಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿದ್ದು, ದೇವರಲ್ಲಿ ಕ್ಷಮೆಯಾಚಿಸಿ, ಪತಿ ಹಾಗೂ ಮಕ್ಕಳು ಚೆನ್ನಾಗಿ ನೋಡಿಕೊಂಡಿದ್ದರು ಎಂದು ಹೇಳಿದ್ದಾರೆ.
ಈ ಸಂಬಂಧ ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.