ನವದೆಹಲಿ: ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕೈಗೊಂಡ ಪ್ರಯೋಗ ಮೊದಲ ಯತ್ನದಲ್ಲೇ ಯಶಸ್ವಿಯಾಗಿದೆ.
‘ಇಸ್ರೋ’ ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿದ್ದ 8 ಅಲಸಂದೆ ಬೀಜಗಳು ಮೊಳಕೆಯೊಡೆದಿವೆ.
‘ಬಾಹ್ಯಾಕಾಶದಲ್ಲಿ ಹೊಸ ಜೀವದ ಉಗಮವಾಗಿದೆ. ಹೊಸ ಬದುಕು ಚಿಗುರಿದೆ’ ಎಂದು ‘ಇಸ್ರೋ’ ತನ್ನ ಅಧಿಕೃತ ‘ಟ್ವಿಟರ್’ ಖಾತೆಯಲ್ಲಿ ಶನಿವಾರ ಮಾಹಿತಿ ಹಂಚಿಕೊಂಡು ಸಂಭ್ರಮಿಸಿದೆ.
ಬಾಹ್ಯಾಕಾಶಕ್ಕೆ ಕಳುಹಿಸಿ ಕೊಡಲಾಗಿದ್ದ ಅಲಸಂದೆ ಬೀಜಗಳು ಬಾಹ್ಯಾಕಾಶ ಸೇರಿದ 4 ದಿನಗಳಲ್ಲೇ ಮೊಳಕೆ ಬಂದಿವೆ ಎಂದು ಇಸ್ರೋ ಹೇಳಿದೆ.
“ಬಾಹ್ಯಾಕಾಶದಲ್ಲಿ ಡಾಕಿಂಗ್‌ಗಾಗಿ ಜೋಡಿ ಉಪಗ್ರಹಗಳನ್ನು ಹೊತ್ತು ಮಂಗಳವಾರ ಉಡಾವಣೆಗೊಂಡ ಪಿಎಸ್‌ಎಲ್‌ವಿ-ಸಿ60 ರಾಕೆಟ್‌ನಲ್ಲಿಯೇ ಅಲಸಂದೆ ಬೀಜಗಳು ಸೇರಿದಂತೆ ಅಂತರಿಕ್ಷದಲ್ಲಿ ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಇರಿಸಲಾಗಿತ್ತು.
ಈ ಘಟಕ ಇನ್ನೂ 3-4 ದಿನ ಕಾರ್ಯನಿರ್ವಹಿಸಲಿದೆ. ಬಾಹ್ಯಾಕಾಶದಲ್ಲಿ ಸಸ್ಯ ಬೆಳವಣಿಗೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತದೆ’ ಎಂದು ಇಸ್ರೋ ಹೇಳಿದೆ.
ಡಿ.30ರ ರಾತ್ರಿಯಷ್ಟೇ ಪಿಎಸ್‌ಎಲ್‌ವಿ-ಸಿ60 ರಾಕೆಟ್ ಅವಳಿ ಉಪಗ್ರಹಗಳನ್ನು ಭೂಮಿಯಿಂದ 350 ಕಿಮೀ ಎತ್ತರದ ಆಕಾಶಕ್ಕೆ ಯಶಸ್ವಿಯಾಗಿ ಕೊಂಡೊಯ್ದು ತಲುಪಿಸಿದ ಉಡ್ಡಯನ ಕಾರ್ಯಾಚರಣೆಯ ಭಾಗವಾಗಿಯೇ ಈ ‘ಕ್ರಾಪ್ಸ್’ ಪ್ರಯೋಗ ವನ್ನೂ ನಡೆಸಲಾಗಿದೆ.
8 ಅಲಸಂದೆ ಬೀಜಗಳು, ಅವು ಮೊಳಕೆಯೊಡೆಯಲು ಬೇಕಾದ ಪರಿಕರಗಳು ಎಲ್ಲವನ್ನು ಒಳಗೊಂಡ ‘ಪಿಒಇಎಂ-4’ ಪ್ಲಾಟ್‌ಫಾರ್ಮ್ ಪಿಎಸ್‌ಎಲ್‌ವಿ-ಸಿ60 ರಾಕೆಟ್‌ನ 4ನೇ ಹಂತದಲ್ಲಿತ್ತು. ಇದಕ್ಕೂ ಮುನ್ನ ಚೀನಾ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜಲಚರಗಳನ್ನು ಬೆಳೆಸುವ ಪ್ರಯೋಗ ನಡೆಸಿ ಯಶಸ್ಸು ಕಂಡಿದೆ.
Life sprouts in space!
— ISRO (@isro) January 4, 2025VSSC's CROPS (Compact Research Module for Orbital Plant Studies) experiment onboard PSLV-C60 POEM-4 successfully sprouted cowpea seeds in 4 days. Leaves expected soon. #ISRO #BiologyInSpace pic.twitter.com/QG7LU7LcRR
ಜೆಲ್ಲಿ ಫಿಶ್ ಗಳನ್ನು ಶೂನ್ಯ ಗುರುತ್ವಾಕರ್ಷಣ ವಲಯದಲ್ಲಿ ಬೆಳೆಸುತ್ತಿರುವ ಚೀನಾ, ಅಂತರಿಕ್ಷದಲ್ಲಿ ಮಾನವನಿಗೆ ಹೊರತಾದ ಜೀವಿಗಳ ಇರುವಿಕೆ ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದೆ.