ದೊಡ್ಡಬಳ್ಳಾಪುರ (Accident): 2024ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 100ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದ ಅಪಘಾತ ಪ್ರಕರಣಗಳು 2025ರ ಆರಂಭದಲ್ಲಿಯೇ ಆತಂಕವನ್ನು ಸೃಷ್ಟಿಸಿವೆ.
ಜನವರಿ ಹೊಸ ವರ್ಷಾಚರಣೆಯ ಮೊದಲ ದಿನವೇ ಸಂಭವಿಸಿದ ಎರಡು ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಮೂವರು ತೀವ್ರವಾಗಿ ಗಾಯಗೊಂಡು ಇಬ್ಬರು ಸಾವನಪ್ಪಿದ್ದರೆ, ಇಂದು ಬೆಳಗ್ಗೆ ಮೇಷ್ಟ್ರು ಮನೆ ಕ್ರಾಸ್ ಬಳಿ ಕ್ಯಾಂಟರ್ ಟ್ಯಾಂಕರ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಸ್ಥಿತಿ ಗಂಭೀರವಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ನಾಲ್ಕು ದಿಕ್ಕುಗಳನ್ನು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸುತ್ತುವರೆದಿವೆ. ಇದರಿಂದ ದೂರದ ನಗರಗಳು ಸಮೀಪವಾಗಿವೆ. ಹಾಗೆಯೇ ಸಾವು ನೋವುಗಳ ಸಂಖ್ಯೆಯು ಹೆಚ್ಚಾಗುತ್ತಿವೆ.
ಹೌದು ಹೆದ್ದಾರಿಗಳಲ್ಲಿ ಸರಿಯಾದ ಹೆದ್ದಾರಿಗಳಲ್ಲಿ ಸರಿಯಾದ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ, ತಮ್ಮ ಪಾಡಿಗೆ ತಾವು ಜಮೀನಿನಲ್ಲಿ ದೇವರಿಗೆಂದು ಹೂ ಬಿಡಿಸುತ್ತಿದ್ದರು ಅಪಘಾತ, ಪ್ರಾಣಹಾನಿ ಮಾತ್ರ ತಪ್ಪಿದ್ದಲ್ಲ ಎನ್ನುವ ಪರಿಸ್ಥಿತಿ ಇದೆ.
ಚಾಲಕರ ಸಂಚಾರ ನಿಯಮ ಪಾಲನೆ ತಪ್ಪು ಒಂದು ಕಡೆಯಾದರೆ, ಮತ್ತೊಂದು ಕಡೆ ರಾಜ್ಯ ಹೆದ್ದಾರಿಗಳಲ್ಲಿನ ಅವೈಜ್ಞಾನಿಕ ತಿರುವು, ರಸ್ತೆ ಉಬ್ಬುಗಳು, ರಸ್ತೆ ಬದಿಯಲ್ಲಿಯೇ ವಾಹನಗಳ ನಿಲುಗಡೆಯೂ ಕಾರಣವಾಗುತ್ತಿವೆ.
ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ, ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿಗಳು ನಿರ್ಮಾಣದ ನಂತರ ವಾರದಲ್ಲಿ ಒಂದೆರಡು ಅಪಘಾತ, ಸಾವುಗಳು ಸಾಮಾನ್ಯ ಎನ್ನುವಂತಾಗಿವೆ.
ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ; ಹರೀಶ್ ಗೌಡ ಆಕ್ರೋಶ
ದೊಡ್ಡಬಳ್ಳಾಪುರದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಕುರಿತು ಆತಂಕ ವ್ಯಕ್ತಪಡಿಸಿರುವ ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ, ಅಪಘಾತ ಪ್ರಕರಣಗಳ ಕಡಿವಾಣಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಸಂಭವಿಸುತ್ತಿರುವ ಅಪಘಾತದಿಂದಾಗಿ ಸಾವು, ನೋವು ಒಂದೇ ಸಮ ಸಂಭವಿಸುತ್ತಿದ್ದರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದೆ ಉಳಿದಿದ್ದಾರೆಂದು ಆರೋಪಿಸಿದ್ದಾರೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣದಿಂದಾಗಿ ತಾಲೂಕಿನಲ್ಲಿ ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ.
ಕೂಡಲೇ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಅಪಘಾತ ತಡೆಗೆ ಕಠಿಣವಾದ ಕ್ರಮಕೈಗೊಳ್ಳಬೇಕಿದೆ.
ಮುಖ್ಯವಾಗಿ ಪದೇ ಪದೆ ಅಪಘಾತ ಸಂಭವಿಸುತ್ತಿರುವ ರಸ್ತೆಗಳಲ್ಲಿ ಗಸ್ತು ವಾಹನ ಹೆಚ್ಚಿಸಬೇಕಿದೆ, ಸ್ಪೀಡ್ ಬ್ರೆಕರ್ ಅಳವಡಿಸುವುದು, ರಿಪ್ಲೆಕ್ಟರ್ ಅಳವಡಿಸುವುದ ಜೊತೆಗೆ ಹಣ ಸುಲಿಗೆ ಮಾಡಲಿಕ್ಕೆ ಮಾತ್ರ ಸೀಮಿತ ಎಂಬಂತೆ, ವಾಹನ ಸವಾರರ ಸುರಕ್ಷತೆ ಮರೆತಿರುವ ಟೋಲ್ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಹರೀಶ್ ಗೌಡ ಮನವಿ ಮಾಡಿದ್ದಾರೆ.