ದೊಡ್ಡಬಳ್ಳಾಪುರ: ತಾಲೂಕಿನ ಮಧುರೆ ಹೋಬಳಿ ಕನಸವಾಡಿಯಲ್ಲಿ (Kanasavadi) ಏ.12 ಮತ್ತು 13ರಂದು (ಶನಿವಾರ ಮತ್ತು ಭಾನುವಾರ) ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಆದರೆ ಈ ಸಮ್ಮೇಳನದಲ್ಲಿ ಉದ್ದೇಶ ಪೂರ್ವಕವಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಉಪ ನಗರ ವರ್ತುಲ ಯೋಜನೆ ಪ್ರಾಧಿಕಾರದ ಸದಸ್ಯ (STRR) ನ್ಯಾಯವಾದಿ ದೀಪು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನಮ್ಮ ಹೆಮ್ಮೆಯ ಕನಸವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಆದರೆ ನಮ್ಮದೇ ಹೋಬಳಿಯಲ್ಲಿ ನಡೆಯುತ್ತಿರುವ ಅಕ್ಷರ ಜಾತ್ರೆಗೆ ರಾಜ್ಯ ಸರ್ಕಾರ ನೇಮಕ ಮಾಡಿರುವ ಪ್ರತಿನಿಧಿಗಳಿಗೆ ಕನಿಷ್ಠ ಆಹ್ವಾನ ನೀಡಬೇಕೆಂಬ ಗೌರವ ಆಯೋಜಕರಿಗಿಲ್ಲವಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನ ಎಲರನ್ನೂ ಒಳಗೊಂಡಂತೆ ಮಾಡಬೇಕೆ ಹೊರತು ಏಕ ಪಕ್ಷೀಯವಾಗಿ ಯಾರದೋ ಅಣತಿಯಂತೆ ವರ್ತಿಸಬಾರದು ಎಂದು ದೀಪು ಅವರು ಕಿಡಿಕಾರಿದ್ದಾರೆ.
ಈ ರೀತಿ ಹೋಬಳಿಯಲ್ಲಿ ಪ್ರತಿನಿಧಿಗಳ ಶಿಷ್ಟಾಚಾರ ಉಲ್ಲಂಘನೆ ಕುರಿತು ಅನೇಕ ಆಕ್ಷೇಪದ ಮಾತುಗಳು ಕೇಳಿಬರುತ್ತಿವೆ. ಕೆಲವರು ಪ್ರತಿಭಟನೆಗೂ ಸಿದ್ದರಾಗಿದ್ದಾರೆನ್ನಲಾಗುತ್ತಿದೆ.
ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರು, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾದಿಯಾಗಿ ಅನೇಕರ ಗಮನಕ್ಕೆ ತರಲಾಗಿದೆ. ಆದರೆ ಹೋಬಳಿ ಅಧ್ಯಕ್ಷರು ಮಾಡಿದ ಲೋಪದಿಂದಾಗಿ ಸಾಹಿತ್ಯ ಸಮ್ಮೇಳನದ ಸಂಭ್ರಮ ಕಳೆಗುಂದುವಂತೆ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.