ಬೆಂಗಳೂರು: ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ.. ಇದು ನಮ್ಮ ಸ್ಲೋಗನ್ ಅಲ್ಲ, ಇದು ಕನ್ನಡಿಗರ ಭಾವನೆ. ಇದು ಜೆಡಿಎಸ್ (JDS) ಪಕ್ಷದ ದನಿಯಲ್ಲ, ಅದು ಬೆಲೆ ಏರಿಕೆಯಿಂದ ಬಸವಳಿದಿರುವ ಸಾಮಾನ್ಯ ಕನ್ನಡಿಗನ ದನಿ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾಕಪ್ಪ ಸಾಕು ಈ ಕಾಂಗ್ರೆಸ್ ಸರ್ಕಾರ ಅನ್ನೋ ಭಾವನೆ ಜನರ ಮನಸಿನಲ್ಲಿ ಬಂದಿದೆ. ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ.
ಕಾಂಗ್ರೆಸ್ಸಿನ ದುರಾಡಳಿತಕ್ಕೆ ದಿಟ್ಟ ಉತ್ತರ ನೀಡಬೇಕಿದೆ. ಈ ಹೊರಟ್ಟಕ್ಕೆ ನಮ್ಮ ಜತೆ ಕೈ ಜೋಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಅಭಿಯಾನವನ್ನು ಯಶಸ್ವಿಗೊಳಿಸೋಣ. ಭ್ರಷ್ಟ ಕಾಂಗ್ರೆಸ್ ನೀತಿಯನ್ನು ಖಂಡಿಸೋಣ ಎಂದು ಅವರು ಕಿಡಿಕಾರಿದರು.
ಪ್ರತಿಭಟನೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗಿ
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಎಂಬ ಘೋಷವಾಕ್ಯದೊಂದಿಗೆ “ವಿಧಾನಸೌಧ” ಚಲೋ ಚಳುವಳಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.
ಗಾಳಿ ಬಿಟ್ಟು ಇನ್ನೆಲ್ಲ ದರ ಏರಿಕೆ ಆಗಿದೆ
ಕಾಕಾ ಪಾಟೀಲ್ ನಿನಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ ಅಂತಾ ಪುಂಗಿದ್ದ ಸರ್ಕಾರ ಇವಾಗ ಕಾಣೆ ಆಗಿದೆ. 48 ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ವಿರುದ್ದ ನಮ್ಮ ಹೋರಾಟ. ಯಾವುದೇ ವರ್ಗದಲ್ಲಿ ಬೆಲೆ ಏರಿಕೆ ಬಿಟ್ಟಿಲ್ಲ. ಜನರು ಜೀವನ ಮಾಡೋಕೆ ಆಗ್ತಿಲ್ಲ ಎಂದು ಅವರು ಕಿಡಿಕಾರಿದರು.
ದಶದಿಕ್ಕುಗಳಿಂದಲೂ ಜನರಿಗೆ ಬೆಲೆ ಏರಿಕೆಯ ಬರೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಇತ್ತೀಚೆಗಂತೂ ಸರಣಿ ಬೆಲೆ ಏರಿಕೆಗಳಾಗಿವೆ. ವಿದ್ಯುತ್ ಬೆಲೆ ಹೆಚ್ಚಳವಾಯಿತು, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳವಾಯಿತು, ಹಾಲಿನ ದರ ಹೆಚ್ಚಳವಾಯಿತು, ರಾಜ್ಯದಲ್ಲಿರುವ ಟೋಲ್ ಗಳ ದರ ಹೆಚ್ಚಳವಾಯಿತು, ಕಸ ಸಂಗ್ರಹಣೆ ಮೇಲೂ ತೆರಿಗೆ ಹಾಕಲಾಗಿತು, ನಮ್ಮ ಮಟ್ರೋ ದರ, ಕೆಎಸ್ ಆರ್ ಟಿಸಿ ಬಸ್ಸುಗಳ ಟಿಕೆಟ್ ದರ ಏರಿಕೆ… ನೀರಿನ ದರ ಏರಿಕೆ, ಹೀಗೆ.. ಒಂದೇ ಎರಡೇ ಜನರಿಗೆ ದಶದಿಕ್ಕುಗಳಿಂದಲೂ ಬೆಲೆಯೇರಿಕೆಯ ಬರೆಗಳು ಬೀಳುತ್ತಲೇ ಇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.