ದೊಡ್ಡಬಳ್ಳಾಪುರ (Doddaballapura): ಉಪಲೋಕಾಯುಕ್ತ ಬಿ.ವೀರಪ್ಪ ಅವರು ಇಂದು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ರಾಗಿ ಖರೀದಿ ಕೇಂದ್ರದ ಬಳಿ ಇದ್ದ ರೈತರಿಗೆ ಕುಡಿಯುವ ನೀರಿನ ಸಮಸ್ಯೆ, ಆಗುತ್ತಿರುವ ವಿಳಂಬ, ತೂಕದಲ್ಲಿ ಮೋಸ, ಕುಳಿತು ಕೊಳ್ಳಲು ಆಸನದ ವ್ಯವಸ್ಥೆ ಇಲ್ಲದೆ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಗಮನಕ್ಕೆ ತಂದರು.
ಅಲ್ಲದೆ ನೊಂದಣಿ ಕಾರ್ಯ ನಿರ್ವಹಿಸುತ್ತಿರುವ ಶೌಚಾಲಯದ ಸಮಸ್ಯೆ ತಿಳಿದು ಸಿಡಿಮಿಡಿಗೊಂಡ ಉಪಲೋಕಾಯುಕ್ತ ಬಿ.ವೀರಪ್ಪ ಅವರು, ಉಪವಿಭಾಗಾಧಿಕಾರಿ ದುರ್ಗಾಶ್ರೀ ಮತ್ತು ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರನ್ನು ತರಾಟೆಗೆ ತೆಗೆದುಕೊಂಡರು.
ನೀವಿಬ್ಬರು ಹೆಣ್ಣು ಮಕ್ಕಳಾಗಿದ್ದೀರಿ.. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಣ್ಣು ಮಕ್ಕಳ ಸಮಸ್ಯೆ ತಿಳಿದಿಲ್ಲವೇ..?, ಅಲ್ಲದೆ ಇವರಿಗೆ ವೇತನ ನೀಡಿಲ್ಲ, ಸಂಬಳ ಬಂದಿಲ್ಲ ಅಂದ್ರೆ ಏನ್ ತಿನ್ನಬೇಕು ಅವರು, ಇವರನ್ನು ಯಾವ ಆಧಾರದಲ್ಲಿ ನೇಮಕ ಆಗಿದೆ ಕೂಡಲೇ ಈ ಕುರಿತು ವರದಿ ನೀಡಿ, ಆದೇಶಿಸಿದರು.
ಅಲ್ಲದೆ ರೈತರು ನೀಡಿರುವ ದೂರಿನ ಕುರಿತು ಮೂರು ದಿನಗಳ ಗಡುವು ನೀಡಲಾಗಿದೆ. ಬಳಿಕ ಬಂದು ನೋಡಲಾಗುವುದು ಎಂದರು.
ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಎಸ್ಪಿ ಪವನ್ ನೆಜ್ಜೂರ್ ಮಾಹಿತಿ ನೀಡಿ, ರಾಗಿ ಖರೀದಿ ಕೇಂದ್ರದಲ್ಲಿ ವ್ಯವಸ್ಥೆ ಪರಿಶೀಲನಗೆ ಬರಲಾಗಿದೆ. ಇಲ್ಲಿನ ರೈತರ ಸಮಸ್ಯೆ ಆಲಿಸಲಾಗಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಡಿವೈಎಸ್ಪಿ ವೆಂಕಟೇಶ್, ಇನ್ಸ್ ಪೆಕ್ಟರ್ ರಮೇಶ್, ಚಂದ್ರಕಾಂತ್, ನಂದಕುಮಾರ್, ಹಾಲಪ್ಪ ಬಾಲದಂಡಿ, ಉಮಾಮಹೇಶ್, ಸಿಬ್ಬಂದಿ ಇದ್ದರು.