ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ ಉದ್ಘಾಟಿಸಿ ದೇಶದ ಸೇವೆಗೆ ಅರ್ಪಿಸಿದರು.
ಲಂಕೆಗೆ ವಾನರ ಸೇನೆಯನ್ನು ಕರೆದೊಯ್ಯಲು ಶ್ರೀರಾಮ ಚಂದ್ರ ಪುರಾಣ ಕಾಲದಲ್ಲಿ ನಿರ್ಮಿಸಿದ ರಾಮಸೇತು ಪ್ರದೇಶವಾದ ರಾಮೇಶ್ವರಂನಿಂದ ಆರಂಭಗೊಳ್ಳುವ ಪಂಬನ್ ಸೇತುವೆಯನ್ನು ಶ್ರೀ ರಾಮನವಮಿ ದಿನವೇ ಉದ್ಘಾಟನೆ ಮಾಡಿರುವುದು ವಿಶೇಷ.
ರಾಮೇಶ್ವರಂ-ಚೆನ್ನೈನ ತಂಬರಂ ನಗರಗಳನ್ನು ಸಂಪರ್ಕಿಸುವ ಹೊಸ ರೈಲಿನ ಸಂಚಾರಕ್ಕೂ ಪ್ರಧಾನಿ ಮೋದಿ ಇದೇ ವೇಳೆ ಹಸಿರು ನಿಶಾನೆ ತೋರಿದರು. ಜತೆಗೆ ಕರಾವಳಿ ಕಾವಲು ಪಡೆಯ ಗಸ್ತು ನೌಕೆಯ ಕಾರ್ಯಾರಂಭಕ್ಕೂ ಮೋದಿ ಚಾಲನೆ ನೀಡಿದರು. ಈ ಸಂದರ್ಭ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮತ್ತಿತರರು ಉಪಸ್ಥಿತರಿದ್ದರು.
ಸೇತುವೆಯ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಮುನ್ನ, ಕರಾವಳಿ ನಗರ ರಾಮೇಶ್ವರಂನಲ್ಲಿ ಬಿಗಿಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
ಸೇತುವೆಯ ವೈಶಿಷ್ಟ್ಯ:
ಪಂಬನ್-ರಾಮೇಶ್ವರಂ ನಡುವೆ ಸಂಪರ್ಕ ಕಲಿಸುವ 2.08 ಕಿಮೀ ಉದ್ದದ ಸೇತುವೆಯನ್ನು 550 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಲಂಡನ್ ಸೇತುವೆ ಮಾದರಿಯಲ್ಲಿಯೇ ಲಂಬ ಕೋನದಲ್ಲಿ ತೆರೆದುಕೊಳ್ಳುವ ಈ ಸೇತುವೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರ ವೇಳೆ ಸೇತುವೆ ಇಬ್ಬಾಗವಾಗಿ ಮೇಲಕ್ಕೆ ತೆರೆದುಕೊಳ್ಳುತ್ತದೆ. ಸೇತುವೆಯಲ್ಲಿ ಎರಡು ಹಳಿಗಳಿದ್ದು ಏಕಕಾಲದಲ್ಲಿ 2 ರೈಲುಗಳು ಸಂಚರಿಸಬಹುದಾಗಿದೆ.
ಸ್ವಯಂಚಾಲಿತ: ಸೇತುವೆ ಎಲೆಕ್ಟಿಕಲ್ ಆಟೋಮೆಕ್ಯಾನಿಕಲ್ ತಂತ್ರಜ್ಞಾನ ಒಳಗೊಂಡಿದ್ದು, ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ.
111 ವರ್ಷ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಹಳೆಯ ಸೇತುವೆ ಹಡಗುಗಳು ಬಂದಾಗ ಸಮುದ್ರಕ್ಕೆ ಸಮಾನಾಂತರವಾಗಿ ತೆರೆದುಕೊಳ್ಳುತ್ತಿತ್ತು. ಹಾಗೆ ತೆರೆದುಕೊಳ್ಳಲು 45 ನಿಮಿಷ ತೆಗೆದುಕೊಳ್ಳುತ್ತಿತ್ತು. ಆದರೆ ಹೊಸ ಸೇತುವೆ 5 ನಿಮಿಷ 3 ಸೆಕೆಂಡ್‌ಗಳಲ್ಲಿ ತೆರೆದುಕೊಳ್ಳುವಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸೇತುವೆ ನಿರ್ಮಾಣದ ಇಂಜಿನಿಯರ್‌ಗಳು ವಿವರಿಸಿದ್ದಾರೆ.