ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಮದಗೊಂಡನಹಳ್ಳಿ ಗ್ರಾಮದ ಖ್ಯಾತ ಶಿಕ್ಷಣ ತಜ್ಞ ಸಿ.ರಾಮಯ್ಯ ಅವರು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಸಿ.ರಾಮಯ್ಯ ಅವರು ದೊಡ್ಡಬಳ್ಳಾಪುರ ನಗರದ ಶಾರದ ಪ್ರೌಢಶಾಲೆಯ ಶಿಕ್ಷಕರಾಗಿ, ಚೇತನ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ, ಅರವಿಂದ ಶಾಲೆಯ ನಿರ್ದೇಶಕರಾಗಿ, ಮಾರಸಂದ್ರದ ಪಿಕೆಬಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿ, ಪ್ರಸ್ತುತ ವಿನಯಶ್ರೀ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಣ ಕ್ಷೇತ್ರದ ಸೇವೆಯಲ್ಲಿ ಅನೇಕರಿಗೆ ಉದ್ಯೋಗ ಅವಕಾಶ ನೀಡಿರುವ ರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿವೆ. ರಾಮಯ್ಯ ಅವರ ಶಿಷ್ಯರು ಬೆಂಗಳೂರಿನ ವಿವಿಧೆಡೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ಮೃತರು ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಇಂದು ಸಂಜೆ ಮಾರಸಂದ್ರದ ಪಿಕೆಬಿ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಬಳಿಕ ಮದಗೊಂಡನಹಳ್ಳಿಯಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ದತೆ ನಡೆಸಲಾಗುತಿದ್ದು, ವಿದೇಶದಲ್ಲಿರುವ ಮಕ್ಕಳ ಬರುವಿಕೆಗೆ ನಿರೀಕ್ಷಿಸಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿ.ರಾಮಯ್ಯ ಅವರ ಅಗಲಿಕೆಗೆ ಎಂಎಸ್‌ವಿ ಶಾಲೆಯ ಅಧ್ಯಕ್ಷ ಎ.ಸುಬ್ರಹ್ಮಣ್ಯ ಅವರು ಕಂಬನಿ ಮಿಡಿದಿದ್ದಾರೆ.