ದೊಡ್ಡಬಳ್ಳಾಪುರ (Doddaballapura); ನಗರದ ಪ್ರತಿಷ್ಠಿತ ಶಾಲೆಗಳಾದ ನಳಂದ ಪ್ರೌಢಶಾಲೆ ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳಲ್ಲಿ ಇಂದು ನರ್ಸರಿ ಒಳಗೊಂಡಂತೆ 9ನೇ ತರಗತಿವರೆಗೂ ವಾರ್ಷಿಕ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಗಳ ಕಾರ್ಯದರ್ಶಿ ಅನುರಾಧ ಕೆ.ಆರ್., ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲಾ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದಿರುವುದು ಸಂತಸದ ವಿಷಯವಾಗಿದ್ದು, ವಿದ್ಯಾರ್ಥಿಗಳ ಜೀವನದಲ್ಲಿ ಈ ದಿನ ಸಾಧನಾ ದಿನವಾಗಿದೆ ಎಂದರು.
ವಿದ್ಯಾರ್ಥಿಗಳು ಇದೇ ರೀತಿ ಇನ್ನು ಮುಂದೆಯೂ ಮೌಲ್ಯಾಧಾರಿತ ಮತ್ತು ಎ ಐ ಇಂಟಗ್ರೇಟೆಡ್ ವೈಜ್ಞಾನಿಕ ಶಿಕ್ಷಣವನ್ನು ಪಡೆದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲಿ ಎಂದು ಅಭಿನಂದಿಸಿದರು.
ಫಲಿತಾಂಶ

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ 100% ಗಳಿಸಿದ್ದು ಪಠ್ಯೇತರ ಚಟುವಟಿಕೆಗಳಾದ ಅಬ್ಯಾಕಸ್ ನಲ್ಲಿ 1858 ವಿದ್ಯಾರ್ಥಿಗಳು, ಕಂಪ್ಯೂಟರ್ ವಿಜ್ಞಾನದಲ್ಲಿ 1650 ವಿದ್ಯಾರ್ಥಿಗಳು, ಕ್ರೀಡಾ ಚಟುವಟಿಕೆಗಳಲ್ಲಿ 2180 ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ 545 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗಾಗಿ ಸರ್ಟಿಫಿಕೇಟ್ ಗಳನ್ನು ಪಡೆದಿದ್ದಾರೆ.
ಶಿಸ್ತು ಮತ್ತು ಸಾಹಸಕ್ಕೆ ಹೆಸರಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವಿವಿಧ ಶ್ರೇಣಿಗಳಲ್ಲಿ ಈ ವರ್ಷ ನಡೆದ ಪರೀಕ್ಷೆಗಳಲ್ಲಿ ಒಟ್ಟು 652 ವಿದ್ಯಾರ್ಥಿಗಳು ಗೌರವಾನ್ವಿತ ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್ ರವರಿಂದ ಸರ್ಟಿಫಿಕೇಟ್ ಗಳನ್ನು ಪಡೆದು ರಾಜ್ಯಮಟ್ಟದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ದೇಶಭಕ್ತಿ ಮತ್ತು ರಾಷ್ಟ್ರಕರ್ತವ್ಯಗಳನ್ನು ಮೂಡಿಸುವ ಸಲುವಾಗಿ ಶಾಲೆಯ ಪ್ರತಿ ವಿದ್ಯಾರ್ಥಿ , ಶಿಕ್ಷಕರು ಹಾಗೂ ಆಡಳಿತ ಮಂಡಳಿ ವತಿಯಿಂದ ತಿಂಗಳಿಗೆ ರೂ.30, 000/- ರಂತೆ ಒಟ್ಟು ರೂ 2,10,000/- ಗಳನ್ನು ಭಾರತದ ರಕ್ಷಣಾಪಡೆಗೆ ಕೊಡುಗೆಯಾಗಿ ನೀಡಲಾಗಿದ್ದು, ಪ್ರಧಾನ ಮಂತ್ರಿಗಳ ಕಚೇರಿಯಿಂದ ಪಡೆದ ಅಭಿನಂದನಾ ಪತ್ರವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿತಾ ಕೆ ಪಿ., ಸುನಿತಾ ಪಿ., ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.