ಗದಗ (ಗಜೇಂದಗಢ): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಇಲಾಖೆಗಳಲ್ಲಿಯೂ ಐವತ್ತು ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ. ಮಂತ್ರಿಗಳಲ್ಲಿ ಲಂಚ ಪಡೆಯಲು ಪೈಪೋಟಿ ನಡೆಯುತ್ತಿದೆ. ನಾವು ಹೆಚ್ಚು ಕೆಲಸ ಮಾಡಲು ಪೈಪೋಟಿ ನಡೆಸಿದ್ದೇವು. ಇವರು ಹೆಚ್ಚು ಲಂಚ ಪಡೆಯಲು ಪೈಪೋಟಿ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆರೋಪಿಸಿದ್ದಾರೆ.
ಇಂದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲದ ವತಿಯಿಂದ ಏರ್ಪಡಿಸಿದ ರೋಣ ಮಂಡಲ ಮತ್ತು ಮೋರ್ಚಾಗಳ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿಕಟ ಪೂರ್ವ ಪದಾಧಿಕಾರಿಗಳಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರೋಣ ಮಂಡಳದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಉಮೇಶ್ ಮಲ್ಲಾಪುರ ಅವರಿಗೆ ಅಭಿನಂದನೆಗಳು. ಅವರ ಅವಧಿಯಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆದು, ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ಅಷ್ಟೇ ಅಲ್ಲದೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುವಂತಾಗಲಿ ಎಂದು ಆಶಿಸಿದರು.
ಹಿಂದಿನ ಅಧ್ಯಕ್ಷ ಮುತ್ತಣ್ಣ ಅವರ ಅವಧಿಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲಾಗಿದೆ. ಅವರ ಸೇವೆಯನ್ನು ಪಕ್ಷ ಗುರುತಿಸುತ್ತದೆ. ರೋಣ ಮತಕ್ಷೇತ್ರ ತನ್ನದೇ ಆದ ವೈಶಿಷ್ಟ್ಯದಿಂದ ಕೂಡಿದೆ. ಗಂಡು ಮೆಟ್ಟಿನ ಸ್ಥಳ. ಇಲ್ಲಿನ ಜನರು ಬಹಳ ನಿರ್ಣಾಯಕವಾಗಿ ತೀರ್ಪು ಹೇಳುತ್ತಾರೆ.
ಕಳೆದ ಚುನಾವಣೆಗೂ ಮುಂಚೆ ನಾವು ಹಿಂದೆಂದು ಮಾಡಿರದ ಅಭಿವೃದ್ಧಿ ಮಾಡಿದ್ದೇವು. ಕುಡಿಯುವ ನೀರು, ನೀರಾವರಿ, ಶಾಲೆ, ರಸ್ತೆ ಅಭಿವೃದ್ಧಿ ಮಾಡಿ ಒಳ್ಳೆಯ ಆಡಳಿತ ನೀಡಿದರೂ ರಾಜಕಾರಣದಲ್ಲಿ ಅಂತಿಮ ಕ್ಷಣದಲ್ಲಿ ನಾವು ತೆಗೆದುಕೊಂಡ ನಿರ್ಣಯದಿಂದ ನಮಗೆ ಹಿನ್ನಡೆಯಾಗಿದೆ ಎಂದರು.
ಯಾವ ಭರವಸೆಯಿಂದ ಜನರು ಕಾಂಗ್ರೆಸನ್ನು ಆಯ್ಕೆ ಮಾಡಿದ್ದರೊ ಆ ಭರವಸೆಗಳು ಈಡೇರದೆ ಭ್ರಮನಿರಸನಗೊಂಡಿದ್ದಾರೆ. ಇದು ರೈತ ವಿರೋಧಿ ಸರ್ಕಾರ, ಶ್ರಮ ವಹಿಸಿ ದುಡಿಯುವವರಿಗೆ ಉದ್ಯೋಗವಿಲ್ಲ. ಮಹಿಳೆಯರಿಗೆ ಸುರಕ್ಷತೆ ಇಲ್ಲ. ಇಡೀ ಕರ್ನಾಟಕವನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದಾರೆ.
ಪ್ರತಿಯೊಬ್ಬ ಕನ್ನಡಿಗರ ಮೇಲೆ ಒಂದು ಲಕ್ಷ ರೂ. ಸಾಲ ಇದೆ. ಸ್ವಾತಂತ್ರ್ಯ ಬಂದ ಮೇಲೆ ರಾಜ್ಯದ ಸಾಲ 7 ಲಕ್ಷ ಕೋಟಿ ಇತ್ತು. ಅದರಲ್ಲಿ ಸಿದ್ದರಾಮಯ್ಯ ಅವರು ನಾಲ್ಕು ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಅತಿ ಹೆಚ್ಚು ಸಾಲ ಮಾಡಿದ್ದ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು.
ದ್ವೇಷ ರಾಜಕಾರಣ ಹೆಚ್ಚಳ
ನಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿರುವ ಕಾಮಗಾರಿಗಳಿಗೆ ಸ್ನೇ ಕೊಟ್ಟು, ಈಗ ಒಂದೊಂದು ಕಾಮಗಾರಿಗೂ ಐವತ್ತು ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲ ಇಲಾಖೆಗಳಲ್ಲಿ ಲಂಚ ಇದೆ. ಮಂತ್ರಿಗಳಲ್ಲಿ ಲಂಚ ಪಡೆಯಲು ಪೈಪೋಟಿ ನಡೆಯುತ್ತಿದೆ.
ನಾವು ಹೆಚ್ಚು ಕೆಲಸ ಮಾಡಲು ಪೈಪೋಟಿ ನಡೆಸಿದ್ದೇವು. ಇವರು ಹೆಚ್ಚು ಲಂಚ ಪಡೆಯಲು ಪೈಪೋಟಿ ನಡೆಸಿದ್ದಾರೆ. ಒಬ್ಬ ಮಂತ್ರಿ ತಮ್ಮ ಇಲಾಖೆಗೆ ಬಜೆಟ್ ಕಡಿಮೆ ಇದೆ. ನನಗೆ 40% ಕೊಟ್ಟು ನೀವು ಕೆಲಸ ಮಾಡಿಕೊಳ್ಳಿ ಎಂದು ಹೇಳುತ್ತಾರೆ.
ಒಂದೆಡೆ ಭ್ರಷ್ಟಾಚಾರ, ಇನ್ನೊಂದೆಡೆ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಕೊಲೆ, ಸುಲಿಗೆ ಅತ್ಯಾಚಾರ, ಅಲ್ಲದೇ ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರ ಮೇಲೆ ಒಬ್ಬರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.
ಅವರ ಪಕ್ಷದ ಮಂತಿಗಳ ಮೇಲೆಯೇ ಹನಿಟ್ರ್ಯಾಪ್ ಮಾಡುವಷ್ಟು ದ್ವೇಷ ಅವರಲ್ಲಿ ಬೆಳೆಯುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದರೂ ಅವರ ವಿರುದ್ಧ ಎಫ್‌ಐಆರ್ ಹಾಕುತ್ತಾರೆ. ಯಾರೂ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬಾರದು.
ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಇವರ ಆಡಳಿತ ನೋಡಿದರೆ ತುರ್ತುಪರಿಸ್ಥಿತಿ ನೆನಪಾಗುತ್ತದೆ. ನಮ್ಮ ಪಕ್ಷದ ಕೊಡಗಿನ ಕಾರ್ಯಕರ್ತ ಶಾಸಕರ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಡಬಲ್ ಪರಿಹಾರ
ನಮ್ಮ ಕಾಲದಲ್ಲಿ ಅತಿವೃಷ್ಟಿಯಾಗಿ ಬೆಳೆ ಹಾನಿಯಾಗಿತ್ತು. ನಾನು ಮುಖ್ಯಮಂತ್ರಿಯಾಗಿದ್ದೆ ಬೆಳಗಾವಿ ಅಧಿವೇಶನ ನಡೆದಿತ್ತು. ಆಗ ಸಿದ್ದರಾಮಯ್ಯ ರೈತರಿಗೆ ಏನು ಪರಿಹಾರ ಕೊಡುತ್ತೀರಿ ಎಂದು ಕೇಳಿದ್ದರು. ನಾನು ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಹಣ ನೀಡಿದೆ.
ಕೇಂದ್ರ ಸರ್ಕಾರ ಒಣ ಬೇಸಾಯಕ್ಕೆ ಪ್ರತಿ ಹೆಕ್ಟೇರ್ 6300 ಕೊಟ್ಟಿತ್ತು. ನಾನು 13500 ರೂ. ಕೊಟ್ಟೆ. ನೀರಾವರಿಗೆ 25 ಸಾವಿರ ರೂ. ತೋಟಗಾರಿಕೆಗೆ 28 ಸಾವಿರ ರೂ. ಪರಿಹಾರ ನೀಡಿದೆ. ರಾಜ್ಯದಲ್ಲಿ ಒಂದು ವರ್ಷ ಬರ, ಮತ್ತೊಂದು ವರ್ಷ ಅತಿವೃಷ್ಟಿಯಾಗಿದೆ. ಇದುವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ.
ನಾವು ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಮಾಡಿದ್ದೇವು ಅದನ್ನು ನಿಲ್ಲಿಸಿದರು. ಡಿಸೆಲ್ ಸಬ್ಸಿಡಿ ಕೊಡುತ್ತಿದ್ದೇವು ಅದನ್ನು ನಿಲ್ಲಿಸಿದರು. ಕಳೆದ ವರ್ಷ ಸಾರಾಯಿ ದರ ಹೆಚ್ಚಿಸಿದರು. ಸ್ಟಾಂಪ್ ಡ್ಯೂಟ, ಮೋಟರ್ ವೆಹಿಕಲ್ ತೆರಿಗೆ, ಹಾಲಿನ ದರ, ಡಿಸೇಲ್ ಬೆಲೆ, ನೀರಿನ ದರ ಹೆಚ್ಚಳ ಮಾಡಿದ್ದಾರೆ.
ಎಲ್ಲಾ ದರ ಹೆಚ್ಚಳ ಮಾಡಿ ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ಜನರಿಂದ ವಸೂಲಿ ಮಾಡಿ ಗ್ಯಾರೆಂಟಿ ಕೊಡುತ್ತೇವೆ ಎಂದು ರಾಜಕೀಯ ನಾಟಕ ಮಾಡುತ್ತಾರೆ. ಮುಂದೆ ಅಧಿಕಾರಕ್ಕೆ ಬರುವವರು ಇವರು ಮಾಡಿರುವ ಸಾಲ ತೀರಿಸಲು ಅಧಿಕಾರಕ್ಕೆ ಬರಬೇಕು.
ಸರ್ಕಾರಿ ನೌಕರರಿಗೆ ಒಂದು ಇಲಾಖೆಗೆ ಒಮ್ಮೆ ಸಂಬಳವಾದರೆ ಹತ್ತು ದಿನ ಬಿಟ್ಟು ಮತ್ತೊಂದು ಇಲಾಖೆಗೆ ಬರುತ್ತದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಬರುತ್ತಿಲ್ಲ. ಇಡೀ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಇವತ್ತೇ ಚುನಾವಣೆ ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ಧ ಖಾಸಗಿಯಾಗಿ ಆರೋಪ ಮಾಡುತ್ತಿದ್ದಾರೆ ಎಂದರು.
ಓಟ್ ಬ್ಯಾಂಕ್ ರಾಜಕಾರಣವಿಲ್ಲ
ಭಾರತೀಯ ಜನತಾ ಪಕ್ಷ ಜಗತ್ತಿನಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಸಧೃಢವಾದ ತತ್ವ ಸಿದ್ಧಾಂತದ ಮೇಲೆ ಕಟ್ಟಿರುವ ಪಕ್ಷ. ವಿಶ್ವದಲ್ಲಿಯೇ ಅಗತ್ಯಂತ ಖ್ಯಾತಿ ಪಡೆದ ವಿಶ್ವಾಸಾರ್ಹ ನಾಯಕನನ್ನು ಹೊಂದಿರುವ ಪಕ್ಷ.
ಸಬ್ ಕೆ ಸಾಥ್ ಸಬ್ ಕಾ ವಿಕಾಸ್ ಎನ್ನುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಘೋಷ ವಾಖ್ಯದಂತೆ ಸರ್ವ ಜನಾಂಗದ ಅಭಿವೃದ್ಧಿಗೆ ದುಡಿಯುತ್ತಿರುವ ಪಕ್ಷ. ರೈತರು, ಮೀನುಗಾರರು, ನೇಕಾರರು. ವಿಶ್ವ ಕರ್ಮಿಗಳು, ತಾಯಂದಿರು, ಯುವಕರು, ಐಟಿ ಬಿಟಿ, ಸ್ಟಾರ್ಟ್ ಆಪ್ ಯಾವುದೇ ರಂಗದಲ್ಲಿಯೂ ಭಾರತ ಹಿಂದೆ ಬಿದ್ದಿಲ್ಲ.
ಈಗ ಭಾರತ ಆರ್ಥಿಕವಾಗಿ ಐದನೇ ಸ್ಥಾನದಲ್ಲಿದೆ. ಇನ್ನು ಹತ್ತು ವರ್ಷದಲ್ಲಿ ಮೂರನೇ ಸ್ಥಾನಕ್ಕೆ ಬರುತ್ತದೆ. ಭಾರತಕ್ಕೆ ಭವಿಷ್ಯ ಇದ್ದರೆ ಅದು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಮೋದಿಯವರು ಓಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ.
ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ಮದುವೆಯಾದ ಮೇಲೆ ತ್ರಿಬಲ್ ತಲಾಖ್ ಹೇಳಿದರೆ ಅವರ ಬದುಕು ಅತಂತ್ರ ಆಗುತ್ತಿತ್ತು. ಅದನ್ನು ನರೇಂದ್ರ ಮೋದಿಯವರು ತೆಗೆದು ಹಾಕಿದರು ಅಲ್ಪ ಸಂಖ್ಯಾತ ಬಡ ಹೆಣ್ಣು ಮಕ್ಕಳು ಮೋದಿಯವರನ್ನು ಹರಸುತ್ತಿದ್ದಾರೆ.
ಮೊನ್ನೆ ವಕ್ಸ್ ಕಾಯ್ದೆ ತಿದ್ದುಪಡಿ ಆಯಿತು. ಪ್ರತಿ ವರ್ಷ 42 ಸಾವಿರ ಕೋಟಿ ಆದಾಯ ಬರಬೇಕು. ಆದರೆ, ಕೇವಲ 164 ಕೋಟಿ ಬರುತ್ತಿತ್ತು. ಅದರಿಂದ ಬರುವ ಆದಾಯದಿಂದ ಬಡ ಮುಸ್ಲಿಂ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ನೀಡಬಹುದು. ನಿಜವಾದ ನ್ಯಾಯ ಕೊಡಲು ಮೋದಿಯವರಿಂದ ಮಾತ್ರ ಸಾಧ್ಯ.
ಮಂಡಲ್ ಆಯೋಗದ ವರದಿ ಬಂದು ಇಪ್ಪತ್ತು ವರ್ಷ ಆಗಿತ್ತು. ಕಾಂಗ್ರೆಸ್ ಅದನ್ನು ಹಾಗೆ ಇಟ್ಟುಕೊಂಡಿತ್ತು. ನಮ್ಮ ಸರ್ಕಾರ ಬಂದ ಮೇಲೆ ಕೇಂದ್ರ ಹಾಗೂ ಎಲ್ಲ ರಾಜ್ಯಗಳಲ್ಲಿ ಶಾಸ್ವತ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿ ಸಂವಿಧಾನಿಕ ಮಾನ್ಯತೆ ನೀಡಿದರು.
ಎಸ್ಸಿ ಎಸ್ಟಿ ಸಮುದಾಯಕ್ಕೆ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡಿದೆ. ಬರೀ ಬಾಯಿ ಮಾತಲ್ಲಿ ಮಾತ್ರ ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳಿಗೂ ಅನ್ಯಾಯ ಮಾಡಿದ್ದಾರೆ. ಶೇ 50 ರಷ್ಟು ಹಣವನ್ನೂ ಖರ್ಚು ಮಾಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಇದುವರೆಗೂ ಮಾಡಿಲ್ಲ.
ಅತ್ಯಂತ ಕೆಳ ಸ್ಥರದಲ್ಲಿರುವ ಸಮುದಾಯಗಳ ಈ ಸರ್ಕಾರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಈ ಎಲ್ಲ ವಿಚಾರಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ ಜನರಿಗೆ ಸತ್ಯ ಹೇಳಿ ಜಾಗೃತಿ ಮೂಡಿಸಿ ಜನರಿಗೆ ನ್ಯಾಯ ಹಾಗೂ ಅನುಕೂಲ ಮಾಡಿಕೊಡಲು ಬಿಜೆಪಿ ಮುಂಚೂಣಿಯಲ್ಲಿ ನಿಲ್ಲಬೇಕು. ರೋಣ ತಾಲೂಕಿನಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಿಂದಿನ ಪದಾಧಿಕಾರಿಗಳನ್ನೂ ಸೇರಿಸಿಕೊಂಡು ಕಳಕಪ್ಪ ಬಂಡಿಯವರ ನಾಯಕತ್ವದಲ್ಲಿ ಮಾಡಬೇಕು ಎಂದು ಹೇಳಿದರು.
ಐದು ವರ್ಷಕ್ಕಿಂತ ಮುಂಚೆ ರೊಟ್ಟಿ ತಿರುವಿ ಹಾಕಿ
ರೋಣ ತಾಲೂಕಿನ ಜನರು ಮನಸ್ಸು ಮಾಡಿದರೆ ರೊಟ್ಟಿ ತಿರುವಿ ಹಾಕಿದಂತೆ, ಐದು ವರ್ಷ ಕಾಯುವಂತಿಲ್ಲ. ಅದಕ್ಕೂ ಮುಂಚೆಯೇ ರೊಟ್ಟಿ ತಿರುವಿ ಹಾಕುವ ಪ್ರಸಂಗ ಬರುತ್ತದೆ. ಮತ್ತೊಮ್ಮೆ ಕಳಕಪ್ಪ ಬಂಡಿಯವರನ್ನು ಶಾಸಕರನ್ನಾಗಿ ಮಾಡಬೇಕು.
ಎಲ್ಲಿಯವರೆಗೂ ಕಳಕಪ್ಪ ಬಂಡಿಯನ್ನು ಶಾಸಕರನ್ನಾಗಿ ಮಾಡುವುದಿಲ್ಲವೋ ಅಲ್ಲಿಯವರೆಗೂ ವಿರಮಿಸುವುದಿಲ್ಲ. ಈ ತಾಲೂಕಿನಲ್ಲಿ ಆಗಿರುವ ಬದಲಾವಣೆ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಮಾಡಿ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.