ದೊಡ್ಡಬಳ್ಳಾಪುರ (Doddaballapura): ಇಲ್ಲಿನ ದೇವರಾಜ ನಗರದಲ್ಲಿ ಬುಧವಾರ ಆದ್ಯ ವಚನಕಾರ, ನೇಕಾರ ಸಂತ ಶ್ರೀ ದೇವರ ದಾಸಿಮಯ್ಯ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ದೇವಾಂಗ ಕುಲಗುರು ಶ್ರೀ ದೇವಲ ಮಹರ್ಷಿ ಹಾಗೂ ಆದ್ಯವಚನಕಾರ ದೇವರ ದಾಸಿಮಯ್ಯ ಭಾವಚಿತ್ರಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಅರವಂಟಿಕೆಯನ್ನು ಏರ್ಪಡಿಸಿ, ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಣೆ ಮಾಡಲಾಯಿತು.
ದೇವರ ದಾಸಿಮಯ್ಯ ಅವರ ವಚನಗಳ ಪ್ರಸ್ತುತತೆ ಕುರಿತು ಬೆಂ.ಗ್ರಾ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಆರ್.ರವಿಕಿರಣ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೇವರಾಜನಗರದ ನೇಕಾರ ಸಮುದಾಯಗಳ ಮುಖಂಡರಾದ ಮಂಜುನಾಥ್, ಶಿವಕುಮಾರ್, ಗಂಗಾಧರ್, ಕೆ.ಟಿ.ವೆಂಕಟಾಚಲಯ್ಯ, ದೇವಾಂಗ ಮಂಡಲಿ ಗೌರವ ಕಾರ್ಯದರ್ಶಿ ಎಂ.ಜಿ.ಅಮರನಾಥ್, ದೇವಾಂಗ ಮಂಡಲಿಯ ಉಪಾಧ್ಯಕ್ಷರಾದ ಗೋಪಾಲ್, ಬಿ.ಜಿ.ಅಮರನಾಥ್, ಬಿ.ಜಿ.ಶ್ರೀನಿವಾಸ್, ಸಹಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಅಖಿಲೇಶ್, ಯುವ ಮುಖಂಡರಾದ ಮಧು ಬೇಗಲಿ, ಲೋಕೇಶ್, ನಾರಾಯಣ್ ಸೇರಿದಂತೆ ವಿವಿಧ ನೇಕಾರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಕುಚ್ಚಪ್ಪನ ಪೇಟೆ

ದೊಡ್ಡಬಳ್ಳಾಪುರ ನಗರದ ಕುಚ್ಚಪ್ಪನ ಪೇಟೆಯಲ್ಲಿ ದೇವರ ದಾಸಿಮಯ್ಯ ಸೇವಾ ಸಮಿತಿ ವತಿಯಿಂದ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇವರ ದಾಸಿಮಯ್ಯ ಅವರ ಬದುಕು ಹಾಗೂ ಸಾಹಿತ್ಯ ಕುರಿತು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿ, ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ವಚನದಲ್ಲಿ ಬದುಕಿನ ಮೌಲ್ಯಗಳಿವೆ. ಸದಾ ಕಾಯಕದಲ್ಲಿಯೇ ನಿರತರಾಗಿದ್ದ ಅವರ ವಚನಗಳಲ್ಲಿ, ಕಾಯಕದ ಮಹತ್ವ ಅಡಗಿದ್ದು, ಅವರ ವಚನಗಳು ಹಲವಾರು ವಚನಕಾರರಿಗೆ ತತ್ವಜ್ಞಾನಿಗಳಿಗೆ ಸ್ಪೂರ್ತಿಯಾಗಿದೆ. ಈ ದಿಸೆಯಲ್ಲಿ ದಾಸಿಮಯ್ಯ ಅವರ ಬಗ್ಗೆ ಸಂಶೋಧನಾತ್ಮಕ ಪ್ರಬಂಧಗಳು ಹೊರಬರಬೇಕಿದೆ. ದಾಸಿಮಯ್ಯ ಅವರ ಜೀವನಗಾಥೆ ಹಾಗೂ ವಚನಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಎಸ್.ವತ್ಸಲಾ, ಮಾಜಿ ಸದಸ್ಯ ಪಿ.ಸಿ.ಲಕ್ಷ್ಮೀನಾರಾಯಣ್, ಟಿ.ಎಂ.ಸಿ. ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್, ದೇವಾಂಗ ಮಂಡಲಿಯ ಗೌರವ ಕಾರ್ಯದರ್ಶಿ ಎಂ.ಜಿ.ಅಮರನಾಥ್, ಯಕ್ಷಗಾನ ಕಲಾವಿದ ಕೆ.ಸಿ.ನಾರಾಯಣ್, ಎಂ.ಎ.ಬಿ.ಎಲ್ ವಿದ್ಯಾಸಂಸ್ಥೆಯ ಸಿಇಓ ಪ್ರಿಯಾಂಕ, ದಾಸಿಮಯ್ಯ ಸೇವಾ ಸಮಿತಿಯ ಕೆ.ಎಸ್.ನರೇಂದ್ರ, ರಮೇಶ್, ಪಂಜಿನಿ ರಾಜು, ಕೆ.ಜಿ.ನಾಗೇಂದ್ರ, ಪುನೀತ್, ದೇವಾಂಗ ಮಂಡಲಿ ಪದಾಧಿಕಾರಿಗಳು ಭಾಗವಹಿಸಿದ್ದರು.