ದೊಡ್ಡಬಳ್ಳಾಪುರ: ಹಾಲು ಒಕ್ಕೂಟಗಳ ಮನವಿಯ ಹಿನ್ನೆಲೆಯಲ್ಲಿ ನಂದಿನಿ ಹಾಲಿನ (Milk) ದರವನ್ನು ಪ್ರತಿ ಲೀಟರ್‌ಗೆ ರೂ.4 ಏರಿಕೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದರ ಜೊತೆಗೆ ನಂದಿನಿ ಮೊಸರಿನ ದರವೂ ಕೆ.ಜಿಗೆ ರೂ.4 ಏರಿಕೆಯಾಗಲಿದೆ. ಈ ಹೊಸ ದರ ಏಪ್ರಿಲ್ 1 ರಿಂದ ಅನ್ವಯವಾಗಲಿದೆ.
ಈ ಕುರಿತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿದ್ದರೆ, ಆಡಳಿತ ಪಕ್ಷ ರೈತರಿಗಾಗಿ ಈ ಬೆಲೆ ಏರಿಕೆ ಮಾಡಲಾಗಿದೆ ಎಂದು ಉತ್ತರ ನೀಡಿದೆ.
ಇದೇ ವಿಚಾರವಾಗಿ ಬಮೂಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ (BC Ananad Kumar) ಅವರು ಪ್ರತಿಕ್ರಿಯೆ ನೀಡಿದ್ದು, ಹಾಲಿನ ದರದಲ್ಲಿ 4 ರೂ ಹೆಚ್ಚಿಸಿರುವುದು ರೈತರಿಗೆ ಸ್ವಲ್ಪ ನೆಮ್ಮದಿ ತರಬಹುದೇ ಆದರೂ, ಗ್ರಾಹಕರಿಗೆ ಜೇಬಿಗೆ ಕತ್ತರಿ ಹಾಕಿರುವುದು ಸರಿಯಲ್ಲ ಎಂದಿದ್ದಾರೆ.
ಪಶುಪಾಲನೆ ಉತ್ಪನ್ನಗಳ ಬೆಲೆ ಏರಿಕೆಯಿಂದ ಬಸವಳಿದಿರುವ ರೈತನಿಗೆ ನಷ್ಟ ತಗ್ಗಿಸಲು ಹಾಲಿನ ದರವನ್ನು ರೂ.10 ರೂ ಹೆಚ್ಚಿಸುವಂತೆ ಒಕ್ಕೂಟಗಳು ಮನವಿ ಸಲ್ಲಿಸಿವೆ. ಅಲ್ಲದೆ ಈ ಬೆಲೆ ಏರಿಕೆ ಗ್ರಾಹಕರಿಗೆ ಹೊರೆಯಾಗದಂತೆ ಸರ್ಕಾರದಿಂದ ನೀಡಬೇಕು ಎಂಬುದು ಮನವಿ.
ಆದರೆ ಸರ್ಕಾರ ತನ್ನ ಖಜಾನೆಯಿಂದ ಹಣ ನೀಡದೆ, ಗ್ರಾಹಕರಿಗೆ ಬರೆ ಎಳೆದಿದೆ. ಅಲ್ಲದೆ 10 ರೂ ಮನವಿಗೆ ಕೇವಲ 4 ರೂ ಹೆಚ್ಚಿಸಲು ಮಾತ್ರ ಒಪ್ಪಿಗೆ ನೀಡಿದೆ ಎಂದು ಬಿಸಿ ಆನಂದ್ ಕುಮಾರ್ ಹೇಳಿದ್ದಾರೆ.