ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gouda Patila Yatnal) ಅವರನ್ನು ಆರು ವರ್ಷಗಳ ಅವಧಿಗೆ ಉಚ್ಚಾಟಿಸಿರುವ ಹೈಕಮಾಂಡ್ ನಿರ್ಧಾರಕ್ಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಪಕ್ಷದ ಹೈಕಮಾಂಡ್ ನಿರ್ಧಾರದಿಂದ ಕೆರಳಿರುಚ ಯತ್ನಾಳ್ ಬಣದ ನಾಯಕರು ಇಂದು ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಯತ್ನಾಳ್ ಬಣದಲ್ಲಿ ಕಾಣಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ, ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಹೈಕಮಾಂಡ್ ತನ್ನ ನಿಲುವನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಂಚಮಸಾಲಿ ಸಮುದಾಯದ ಜಯಮೃತ್ಯುಂಜಯ ಸ್ವಾಮೀಜಿ, ಏಪ್ರಿಲ್ 10ರೊಳಗೆ ಯತ್ನಾಳ್ ಉಚ್ಚಾಟನೆ ನಿರ್ಧಾರವನ್ನು ಹಿಂಪಡೆಯಲು ಗಡುವು ನೀಡಿದ್ದಾರೆ.
ಪರಿಣಾಮ ಗೊತ್ತಾಗಲಿದೆ
ಮತ್ತೊಂದೆಡೆ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯ ಪರಿಣಾಮ ಇನ್ನು ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಪರೋಕ್ಷವಾಗಿ ರಾಜ್ಯ ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡುನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆ ಯಾಕಾಯಿತು ಎನ್ನುವುದು ಗೊತ್ತಿಲ್ಲ. ಅದು ಪಕ್ಷದ ನಿರ್ಣಯ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ, ಎರಡು ಮೂರು ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗಲಿದೆ’ ಎಂದರು.
‘ಇನ್ನು ಬಿಜೆಪಿ ನಮ್ಮನ್ನು ಉಚ್ಛಾಟನೆ ಮಾಡಲ್ಲ. ಪಕ್ಷ ಏನೇ ನಿರ್ಧರಿಸಿದರೂ ನಾನು ಸ್ವಾಗತಿಸುವೆ.
ವಿಧಾನಸಭೆ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಆಯಿತು. ಶಾಸಕರಾದ ಸುನೀಲ್ ಕುಮಾರ್, ಆರ್.ಅಶೋಕ್ ಅವರಿಗೆ ಏನೂ ಆಗಲಿಲ್ಲ. ಪಾಪದ ಶಾಸಕರು ಮಾತ್ರ ಅಮಾನತುಗೊಂಡರು.
ದೊಡ್ಡ ನಾಯಕರಿಗೆ ಏನೂ ಆಗಲ್ಲ. ಅವರು ಆರಾಮಾಗಿ ಇರುತ್ತಾರೆ. ಶಾಸಕ ಸೋಮಶೇಖರ್ ಅವರ ಹೇಳಿಕೆಗೆ ನೂರಕ್ಕೆ ನೂರಾ ಒಂದರಷ್ಟು ನನ್ನ ಬೆಂಬಲವಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.