ದೊಡ್ಡಬಳ್ಳಾಪುರ (Doddaballapura): ನಗರದ ರೈಲ್ವೆ ನಿಲ್ದಾಣ ಸಮೀಪ ಬೆಂಗಳೂರು ರಾಜ್ಯ ಹೆದ್ದಾರಿಯ ಬದಿಯಲ್ಲಿನ ಸರ್ವೇ ನಂ.23ರಲ್ಲಿ ದೊಡ್ಡಬಳ್ಳಾಪುರ ನಗರ ಸಂಚಾರ ಪೊಲೀಸ್ ಠಾಣೆ ಮತ್ತು ಪೊಲೀಸ್ ಕವಾಯತು ಮೈದಾನಕ್ಕಾಗಿ ಮೀಸಲಿಟ್ಟಿರುವ 2 ಎಕರೆ 17 ಗುಂಟೆ ಸ್ಥಳಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಸಂಚಾರ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಆರ್ಥಿಕ ನೆರವು ನೀಡುವ ಕುರಿತು ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸ್ಥಳ ಪರಿಶೀಲನೆ ನಡೆಸಲಾಗಿದೆ.
ತಾಲ್ಲೂಕಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾದ ನಂತರ ಅಪಘಾತಗಳ ಸಂಖ್ಯೆಯು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಪೊಲೀಸ್ ಠಾಣೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಹಲವಾರು ಸಂಘ ಸಂಸ್ಥೆಗಳು ಆಗ್ರಹಿಸಿದ್ದವು.
ಸಂಚಾರ ಪೊಲೀಸ್ ಠಾಣೆಗೆ ಸುಮಾರು ಆರು ವರ್ಷಗಳ ಹಿಂದೆಯೇ ಜಮೀನು ಸಹ ಗುರುತಿಸಿ ಮೀಸಲಿಡಲಾಗಿತ್ತು. ಆದರೆ ಸೂಕ್ತ ಆರ್ಥಿಕ ನೆರವು, ಸಿಬ್ಬಂದಿ ನಿಯೋಜನೆ ಇಲ್ಲದೆ ಮೂಲೆಗುಂಪಾಗಿತ್ತು.
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ತಹಶೀಲ್ದಾರ್ ವಿಭಾವಿದ್ಯಾರಾಥೋಡ್, ಡಿವೈಎಸ್ಪಿ ರವಿ, ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ಇದ್ದರು.