ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್ ಹೇಳಿಕೆ ಸಂದರ್ಭದಲ್ಲಿ ತಾವು ಮಾಡಿದ್ದ ಹಲವು ಗಂಭೀರ ಆರೋಪಗಳ ಕುರಿತು ದೂರು ನೀಡುವುದಾಗಿ ಅಬ್ಬರಿಸಿದ್ದ ಸಚಿವ ಕೆ.ಎನ್.ರಾಜಣ್ಣ (KN Rajanna) ಪಕ್ಕಾ ಯೂ ಟರ್ನ್ ತೆಗೆದುಕೊಂಡಿದ್ದಾರೆ.
ಮಂಗಳವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ದೂರಿನ ಬದಲಿಗೆ ಕೇವಲ ಮನವಿ ಮಾಡುವ ಮೂಲಕ ಹಾವು ಬಿಡ್ತಿನಿ ಅಂತ ಹೇಳಿದ್ದವರು ಕೇವಲ ಹಾವ್ರಾಣಿ ಬಿಟ್ಟಿದ್ದಾರೆ.
ತಮ್ಮ ವಿರುದ್ಧದ ಹನಿಟ್ರ್ಯಾಪ್ ಯತ್ನದ ಕುರಿತು ಸದನದಲ್ಲಿ ವಿವರಣೆ ನೀಡುವ ವೇಳೆ ಕೆ.ಎನ್.ರಾಜಣ್ಣ ಅವರು, ಎಲ್ಲಾ ಪಕ್ಷಗಳಿಗೆ ಸೇರಿದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕ ರನ್ನು ಹನಿಟ್ರ್ಯಾಪ್‌ಗೆ ಒಳಪಡಿಸಲಾಗಿದೆ.
ಇಂತಹ 48 ನಾಯಕರ ಸೀಡಿ, ಪೆನ್‌ಡ್ರೈವ್ ಗಳಿವೆ. ರಾಜಕೀಯ ನಾಯಕರು ಮಾತ್ರವಲ್ಲ, ನ್ಯಾಯಾಧೀಶರು ಹನಿಟ್ರ್ಯಾಪ್‌ಗೆ ಒಳಗಾಗಿ ದ್ದಾರೆ ಎಂಬ ಅಬ್ಬರದ ಆರೋಪ ಮಾಡಿದ್ದರು.. ಅಲ್ಲದೆ, ತಮ್ಮನ್ನು ಹನಿಟ್ರ್ಯಾಪ್‌ಗೆ ಒಳಪಡಿಸುವ ಪ್ರಯತ್ನ ನಡೆದಿದ್ದು,ಈಬಗ್ಗೆ ಸಾಕ್ಷಿಯಿದೆ. ದಾಖಲೆ ಸಹಿತ ಈ ಬಗ್ಗೆ ದೂರು ನೀಡಲಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
ಈ ತನಿಖೆಯು ನ್ಯಾಯಸಮ್ಮತವಾಗಿ ನಡೆಸುವ ಮೂಲಕ ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಆದರೆ, ಇದೀಗ ಪೊಲೀಸ್ ದೂರು ನೀಡುವ ತಮ್ಮ ನಿಲುವಿನಿಂದ ಹಿಂದೆ ಸರಿದಿರುವ ಕೆ.ಎನ್.ರಾಜಣ್ಣ ಮಂಗಳವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಮಾತ್ರ ನೀಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಮನವಿ ಪತ್ರದಲ್ಲಿ 48 ನಾಯಕರ ಸೀಡಿ ವಿಚಾರ, ನ್ಯಾಯಾಧೀಶರ ವಿಚಾರ ಸೇರಿ ತಾವು ಮಾಡಿದ್ದ ಗಂಭೀರ ಆರೋಪಗಳ ಬಗ್ಗೆ ಉಲ್ಲೇಖವನ್ನೇ ಮಾಡಿಲ್ಲವಂತೆ. ಅಷ್ಟೇ ಅಲ್ಲದೆ ಈ ಮೊದಲು ನ್ಯಾಯಾಂಗ ತನಿಖೆಯ ಆಗ್ರಹ ಮಾಡಿದ್ದ ಅವರು ಮನವಿಯಲ್ಲಿ ಹನಿಟ್ರ್ಯಾಪ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದಷ್ಟೇ ಕೋರಿದ್ದಾರೆ.
ಸಾಕ್ಷಿ ಇಲ್ಲ
ತಮ್ಮ ವಿರುದ್ದದ ಹನಿಟ್ರ್ಯಾಪ್ ಯತ್ನದ ಕುರಿತು ಸಾಕ್ಷಿಗಳಿವೆ ಎಂದು ಸದನದಲ್ಲಿ ಸಚಿವ ರಾಜಣ್ಣ ತಿಳಿಸಿದ್ದರು. ಅವೆಲ್ಲವನ್ನೂ ಗೃಹ ಸಚಿವರಿಗೆ ನೀಡುತ್ತೇನೆ ಎಂದು ಹೇಳಿದ್ದರು. ಆದರೆ, ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ, ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳಿಲ್ಲ. ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸಿಸಿ ಕ್ಯಾಮರಾ ಇಲ್ಲ.
ಹೀಗಾಗಿ ವಿಡಿಯೋ ಇಲ್ಲ. ಯಾರು ಬಂದು ಹೋಗುತ್ತಾರೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ನನಗೆ ಫೋಟೋ ತೋರಿಸಿದರೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದವರನ್ನು ಪತ್ತೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜಣ್ಣ ಹೇಳಿಕೆ ಆರಂಭದಿಂದಲೂ ಹಲವು ಅನುಮಾನಗಳು ಸ್ವಪಕ್ಷಿಯರಲ್ಲಿಯೇ ಇತ್ತು ಏಕೆಂದರೆ ಅಂದು ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಪತ್ರ ಕಳುಹಿಸಿ ಹನಿ ಟ್ರಾಪ್ ಮಾಡುವಂತೆ ಆಡಳಿತ ಪಕ್ಷದ ಸಚಿವರೆ ಪುಸಲಾಯಿಸಿದ್ದರು. ಬಳಿಕ ರಾಜಣ್ಣ ಈ ರೀತಿ ಗಂಭೀರ ಆರೋಪ ಮಾಡಿದ್ದರು. ಆದರೆ ಈಗ ಎಲ್ಲವೂ ಟುಸ್ ಪಠಾಕಿ ಆದಂತೆ ಕಾಣುತ್ತಿದೆ.