ಬೆಂಗಳೂರು: ಸಂವಿಧಾನ ಬದಲಾವಣೆ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಬಿಜೆಪಿ ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಸ್ಲಿಮರಿಗೆ ಮೀಸಲು ನೀಡಲು ಸಂವಿಧಾನ ಬದಲಾವಣೆ ಮಾಡುವುದಾಗಿ ನಾನು ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದು ಆರೋಪಿಸಿದರು.
ಕಳೆದ 36 ವರ್ಷಗಳಿಂದ ಶಾಸಕನಾಗಿ ವಿಧಾನಸಭೆಯಲ್ಲಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ. ಇಂತಹ ವಿಚಾರದಲ್ಲಿ ಜೆ.ಪಿ ನಡ್ಡಾ ಅವರಿಗಿಂತಲೂ ನಾನು ಉತ್ತಮ ಸೂಕ್ಷ್ಮತೆ ಇರುವ ರಾಜಕಾರಣಿ. ಆದರೆ ಬಿಜೆಪಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.
ನಮ್ಮದು ರಾಷ್ಟ್ರೀಯ ಪಕ್ಷ. ಸುಳ್ಳು ಹೇಳಿಕೆ ಸೃಷ್ಟಿಸಿ, ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನಾನು ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ನ್ಯಾಯಾಲಯಗಳ ತೀರ್ಪಿನ ಅನುಸಾರ ತಿದ್ದುಪಡಿ ತಂದಿರುವ ನಿದರ್ಶನವಿದೆ ಎಂದು ಹೇಳಿದ್ದೇನೆಯೇ ಹೊರತು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿರುವ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ.
ನಮ್ಮದು ರಾಷ್ಟ್ರೀಯ ಪಕ್ಷ, ಸಂವಿಧಾನವನ್ನು ಜಾರಿಗೆ ತಂದಿದ್ದೇ ನಮ್ಮ ಪಕ್ಷ. ಸಂವಿಧಾನದ ಮಹತ್ವ ಬೇರೆಲ್ಲರಿಗಿಂತ ನಮಗೆ ಚೆನ್ನಾಗಿ ಗೊತ್ತಿದೆ.
ಕೇಂದ್ರ ಸರಕಾರ ತನ್ನ ಬಜೆಟ್ ನಲ್ಲಿ ವಿಫಲವಾಗಿದೆ. ಬಜೆಟ್ ನಲ್ಲಿ ಏನೂ ಇಲ್ಲದೇ ಇರುವ ಕಾರಣಕ್ಕೆ ಬಿಜೆಪಿ ಈ ರೀತಿ ಇಲ್ಲಸಲ್ಲದ ವಿಚಾರವನ್ನು ಪ್ರಸ್ತಾವ ಮಾಡುತ್ತಿದೆ. ಇದೊಂದು ನನ್ನ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಮುಂದುವರಿದಿರುವ ರಾಜಕೀಯ ಪಿತೂರಿ ಎಂದು ಸ್ಪಷ್ಟಪಡಿಸಿದರು.