ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ (lakshmi hebbalkar) ಅವರು ಸಾಮೂಹಿಕವಾಗಿ 3 ಸಾವಿರ ಗರ್ಭಿಣಿಯರಿಗೆ (ಉಡಿ ತುಂಬುವ ಮೂಲಕ) ಸಾಂಕೇತಿಕವಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದರು.
ಸರ್ಕಾರದಿಂದ ರಾಜ್ಯದ ಪ್ರತಿಯೊಂದು ಅಂಗನವಾಡಿಗಳನ್ನು ಉನ್ನತ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಭರವಸೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸಿ.ಪಿ.ಎಡ್ ಮೈದಾನದಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ, ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆಗಳ ವಿತರಣೆ, ವಿಭಾಗೀಯ ಮಟ್ಟದ ಸ್ತ್ರೀ ಶಕ್ತಿ ಗುಂಪುಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲೇ ವಿಶೇಷ ಮತ್ತು ವಿನೂತನ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯಲ್ಲಿ ಗರ್ಭಿಣಿಯರಿಗೆ ಕಾಲಕಾಲಕ್ಕೆ ಪೌಷ್ಟಿಕ ಆಹಾರ, ವೈದ್ಯಕೀಯ ಚಿಕಿತ್ಸೆಯನ್ನು ಇಲಾಖೆಯಿಂದ ಒದಗಿಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಒದಗಿಸಲಾಗುತ್ತಿದೆ. ಪ್ರತಿ ಮನೆಗಳಿಗೆ ಗೃಹ ಜ್ಯೋತಿಯಡಿ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.
ಗರ್ಭಿಣಿಯರ ಮಾನಸಿಕತೆ ಚೆನ್ನಾಗಿರಬೇಕು. ದೇಶಕ್ಕೆ ಉತ್ತಮ ಜ್ಞಾನವಂತ ಪ್ರಜೆ ಸಿಗಬೇಕು ಹಾಗಾಗಿ ಗರ್ಭಾವಸ್ಥೆಯಲ್ಲಿ ಮಗು ಧನಾತ್ಮಕವಾಗಿರಬೇಕು ಎಂಬ ಉದ್ದೇಶದಿಂದ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗರ್ಭಿಣಿಯರು ತಾವು ಹೆರುವ ಮಕ್ಕಳನ್ನು ಭಾರತ ದೇಶಕ್ಕೆ, ರಾಜ್ಯಕ್ಕೆ ಉತ್ತಮ ಕೊಡುಗೆಯಾಗಿ ನೀಡಲಿದ್ದಾರೆ.
ಹಿರಿಯ ನಾಗರಿಕರ ಜಿಲ್ಲಾ ಕಮಿಟಿಯ ನೇತೃತ್ವದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಮಗು ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮ, ಭಾಗ್ಯಲಕ್ಷ್ಮಿ ಯೋಜನೆಯ ಸುಕನ್ಯಾ ಸಮೃದ್ಧಿ 5 ಫಲಾನುಭವಿಗಳಿಗೆ ಪಾಸ್‌ಬುಕ್ ವಿತರಣೆ, ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆಗೆ ಹಾಗೂ ಅತ್ಯುತ್ತಮ ಸ್ತ್ರೀ ಶಕ್ತಿ ಸಂಘದವರಿಗೆ ಸನ್ಮಾನಿಸಲಾಯಿತು.