ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ “ಸ್ಮಾರ್ಟ್ ಮೀಟರ್” ಹೆಸರಲ್ಲಿ 15 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆಸಿದೆ. KTTP ಕಾಯ್ದೆಯನ್ನು ಉಲ್ಲಂಘಿಸಿ, ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ ನಡೆಸಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಆರೋಪಿಸಿದರು.
ಈ ಬಗ್ಗೆ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಸ್ಮಾರ್ಟ್ ಮೀಟರ್ ಹಗರಣ ದಿಂದ
ರಾಜ್ಯದ ಪ್ರತಿಯೊಬ್ಬ ಗ್ರಾಹಕನ ಮೇಲೆ ರೂ.8,520 ರೂ ಹೊರೆ ಬೀಳಲಿದೆ. ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆ ರದ್ದು ಮಾಡಿ, ಪಾರದರ್ಶಕವಾಗಿ ಮರು ಟೆಂಡರ್ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿಖಿಲ್ ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷಗಳಾಗುತ್ತಾ ಬಂತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದೊಡ್ಡ ದೊಡ್ಡ ಹಗರಣಗಳು ಬಯಲಿಗೆ ಬರುತ್ತಿದೆ. ಜನ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಸರ್ಕಾರದಲ್ಲಿ ಸ್ಮಾರ್ಟ್ ಮೀಟರ್ ಹಗರಣ ನಡೆದಿದೆ. ಇದರ ಟೆಂಡರ್ ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಸದನದಲ್ಲೂ ಈ ಹಗರಣ ಬಗ್ಗೆ ಪ್ರಸ್ತಾಪ ಆಗಿದೆ. ಹಲವಾರು ರಾಜ್ಯಗಳು ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿವೆ ಎಂದು ತಿಳಿಸಿದರು.
ಇನ್ನು ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಸೂಚನೆ ನೀಡಿತ್ತು. ಕೇಂದ್ರ ಸರ್ಕಾರ ಸ್ಮಾರ್ಟ್ ಮೀಟರ್‌ಗೆ ಸಬ್ಸಿಡಿ ಕೊಡುತ್ತಿದೆ. ಈಗಾಗಲೇ ದೇಶದಲ್ಲಿ 19 ಕೋಟಿಯಷ್ಟು ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ ಇದು ಕರ್ನಾಟಕದಲ್ಲಿ ದೊಡ್ಡ ಅಕ್ರಮವಾಗಿದೆ.
ಕೇರಳ, ಯುಪಿ, ಗುಜರಾತ್, ಹಿಮಾಚಲ ಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್‌ಗೆ 900 ರೂ. ಮಾತ್ರ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಮೀಟರ್ಗೆ 4,998 ರೂ. ಬಾಟಾ ಚಪ್ಪಲಿ ರೀತಿ ಹಣ ಫಿಕ್ಸ್ ಮಾಡಿದ್ದಾರೆ. 2 ಫೇಸ್ ಮೀಟರ್‌ಗೆ 9,000 ರೂ. 3 ಫೇಸ್ ಮೀಟರ್‌ಗೆ 28,000 ಫಿಕ್ಸ್ ಮಾಡಿದ್ದಾರೆ. ನಿರ್ವಹಣೆ ವೆಚ್ಚ ಅಂತ ಬೇರೆ ರಾಜ್ಯದಲ್ಲಿ 57 ರೂ. ಪ್ರತಿ ತಿಂಗಳು ತೆಗೆದುಕೊಳ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರತಿ ತಿಂಗಳು 71 ರೂ. ಪಡೆಯುತ್ತಾರೆ. ಈ ಮೂಲಕ 10 ವರ್ಷಕ್ಕೆ 15,500 ಕೋಟಿ ರೂ. ಸಂಗ್ರಹ ಮಾಡೋಕೆ ಸರ್ಕಾರ ಪ್ಲ್ಯಾನ್ ಮಾಡಿದೆ.
ಇದೊಂದು ದೊಡ್ಡ ಹಗಲು ದರೋಡೆ
ಈ ಟೆಂಡರ್ ನನ್ನು ರಾಜಶ್ರೀ ಎಲೆಕ್ಟ್ರಿಕ್ ಕಂಪನಿಗೆ ಅರ್ಹತೆ ಇಲ್ಲ. ಆದರೂ ಟೆಂಡರ್ ಕೊಟ್ಟಿದ್ದಾರೆ. ಯುಪಿಯಲ್ಲಿ ಬ್ಲ್ಯಾಕ್ ಲಿಸ್ಟ್ ಆಗಿರುವ ಕಂಪನಿಗೆ ಸಬ್ ಕಾಂಟ್ರ್ಯಾಕ್ಟ್ ಅಂತ ಸಾಫ್ಟ್‌ವೇರ್ ಮೆಂಟೇನೆನ್ಸ್‌ಗೆ ಕೊಟ್ಟಿದ್ದಾರೆ.
ನಮ್ಮ ರಾಜ್ಯದಲ್ಲಿ ಯಾಕೆ ಬೆಸ್ಕಾಂನಲ್ಲಿ ತಜ್ಞರು ಇಲ್ಲವಾ? ಇದೊಂದು ದೊಡ್ಡ ಹಗಲು ದರೋಡೆ, 15,500 ಕೋಟಿ ರೂ. ಲೂಟಿ ಆಗಿದೆ. ಕೂಡಲೇ ರೀ-ಟೆಂಡರ್ ಕರೆಯಬೇಕು.ಇದರ ಬಗ್ಗೆ ಜೆಡಿಎಸ್ ಬಿಜೆಪಿ-ನಾವು ಒಟ್ಟಾಗಿ ಅಕ್ರಮದ ಬಗ್ಗೆ ಹೋರಾಟ ಮಾಡಿ, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ದಪ್ಪ ಚರ್ಮ ಇಟ್ಟುಕೊಂಡು ಸರ್ಕಾರ ನಡೆಸುತ್ತಿದ್ದಾರೆ
ಈ ಹಗರಣದಲ್ಲಿ ಯಾರು ಇದ್ದಾರೆ ಹೇಳಬೇಕು. ಸಚಿವರು, ಅಧಿಕಾರಿಗಳ ಗಮನಕ್ಕೆ ಬಾರದೇ ಈ ರೀತಿಯಾಗಲು ಸಾಧ್ಯವಿಲ್ಲ. ರಾಜ್ಯದ ಜನತೆಗೆ ಎಲ್ಲಾ ರೀತಿಯಲ್ಲಿಯೂ ದರ ಏರಿಕೆಯ ಬರೆ ಎಳೆದಿದ್ದಾರೆ. ಯಾವುದನ್ನು ಸಹ ಬಿಟ್ಟಿಲ್ಲ. ಈಗ ಸ್ಮಾರ್ಟ್ ಮೀಟರ್ ಬರೆ ಹಾಕಿದ್ದಾರೆ. ದಪ್ಪ ಚರ್ಮ ಇಟ್ಟುಕೊಂಡು ಸರ್ಕಾರ ಮಾಡ್ತಿದ್ದಾರೆ.
ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಅಂತ ಅವರಿಗೆ ಗೊತ್ತಾಗಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡೋಣ ಅಂತ ಮಾಡ್ತಿದ್ದಾರೆ ಎಂದು ನಿಖಿಲ್ ಅವರು ಕಿಡಿಕಾರಿದರು.
ಸಂವಿಧಾನ ಬದಲಾವಣೆ ಬಗ್ಗೆ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ಅವರು ಸಂವಿಧಾನ ರಕ್ಷಕರು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ.
ಇದನ್ನೂ ಓದಿ: ಮಾತೃ ನಿಂದನೆ ಮಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೇಳಿದ್ದು ಭಾರತ್ ಮಾತಾ ಕಿ ಜೈ..!| Video
ರಾಹುಲ್ ಗಾಂಧಿ ಸಂವಿಧಾನದ ಬುಕ್ ಹಿಡಿದುಕೊಂಡು ಗಂಟೆ ಅಲ್ಲಾಡಿಸಿದರೆ ಆಗುವುದಿಲ್ಲ. ಕಾಂಗ್ರೆಸ್‌ನವರು ನರೇಂದ್ರ ಮೋದಿ ಅವರು ಸಂವಿಧಾನ ಬದಲಾವಣೆ ಮಾಡ್ತಾರೆ ಅಂತ ಅಪಪ್ರಚಾರ ಮಾಡಿದ್ದರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ದಾರೆ.
ಡಿಕೆಶಿ ತಲೆಗೆ ನಟ್ಟು ಬೋಲ್ಟ್ ಇಲ್ಲದ ಕಾರಣ ಅಲ್ಲಾಡುತ್ತಿದೆ ಅನ್ನಿಸುತ್ತಿದೆ. ಹೀಗೆ ಮಾತಾಡಿದರೆ ರಾಜ್ಯದ ಜನರೇ ಇವರ ನೆಟ್ಟು ಬೋಲ್ಟ್ ಟೈಟ್ ಮಾಡ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಬಿಜೆಪಿ ಒಟ್ಟಾಗಿ ಹೋರಾಟ ಮಾಡುತ್ತೇವೆ
ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಜೆಡಿಎಸ್ ವಿರೋಧ ವಿರೋಧವಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯಪಾಲರಿಗೆ ಜೆಡಿಎಸ್ ಶಾಸಕರು ಮತ್ತು ಬಿಜೆಪಿಯವರು ಒಟ್ಟಾಗಿ ದೂರು ಕೊಟ್ಟಿದ್ದಾರೆ.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿ ಜೊತೆ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟ ಮಾತುಗಳಲ್ಲಿ ಉತ್ತರಿಸಿದರು.
ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ. ಹಿಂದುಳಿದ ಸಮುದಾಯಗಳು ಇವೆ. ಮುಸ್ಲಿಮರಿಗೆ ಯಾಕೆ ವಿಶೇಷವಾಗಿ ಮೀಸಲಾತಿ ಕೊಟ್ಟಿದ್ದೀರಾ? ಇದಕ್ಕೆ ನಮ್ಮ ವಿರೋಧ ಇದೆ. ಕಾಂಗ್ರೆಸ್ ಒಲೈಕೆ ರಾಜಕೀಯ ಬಿಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.
ವಿಧಾನಸೌಧದಲ್ಲಿ ಬೆಳಿಗ್ಗೆ “ಮನಿ” ಸಂಜೆ “ಹನಿ”
ಸಚಿವ ರಾಜಣ್ಣ ಹನಿಟ್ರ‍್ಯಾಪ್ ವಿಚಾರಕ್ಕೆ ಮಾತನಾಡಿದ ಅವರು, ದೇವಾಲಯದಂತ ವಿಧಾನಸೌಧದಲ್ಲಿ ಬೆಳ್ಳಗೆ ಮನಿ, ಸಂಜೆ ಹನಿ ಬಗ್ಗೆ ಚರ್ಚೆ ಆಗ್ತಿದೆ ಎಂದು ಎಂದು ನಿಖಿಲ್ ಕುಮಾರಸ್ವಾಮಿ ಅವರು ಬೇಸರ ವ್ಯಕ್ತ ಪಡಿಸಿದರು.
ನಾನು ಒಬ್ಬ ಯುವಕನಾಗಿ ಹೊಸದಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ. ನನ್ನಂತ ಎಷ್ಟೋ ಯುವಕರು ರಾಜಕೀಯಕ್ಕೆ ಬರಬೇಕು ಎಂದು ಬಯಕೆಯಿದೆ. ವಿಧಾನಸೌಧದ ಒಳಗೆ ಅನೇಕ ಪುಣ್ಯಾತ್ಮರು ಆಡಳಿತ ಕೊಟ್ಟಿದ್ದಾರೆ. ಇಂತಹ ದೇವಾಲಯದಲ್ಲಿ ಬೆಳಗ್ಗೆ ಮನಿ, ಸಂಜೆ ಹನಿ ಆಗ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಿಡಿ ಫ್ಯಾಕ್ಟರಿ ಮಾಲೀಕ ಯಾರು.?
ಈ ಸರ್ಕಾರ ಮನಿ-ಹನಿ ಸರ್ಕಾರ ಆಗಿದೆ. ಸದನದ ಒಳಗೆ ರಾಜಣ್ಣ ಅವರು ಆರೋಪ ಮಾಡಿದ್ದರು. ಕ್ಯಾಬಿನೆಟ್ ಸಚಿವರಿಗೆ ರಕ್ಷಣೆ ಇಲ್ಲ. ಬೇರೆ ಅವರ ಕಥೆ ಏನು? 48 ಜನರ ಸಿಡಿ ಇದೆ ಎಂದು ಹೇಳ್ತಾರೆ. ಒಂದು ಕುರ್ಚಿಗೋಸ್ಕರ ಈ ಮಟ್ಟಕ್ಕೆ ರಾಜಕೀಯ ಮಾಡ್ತಿದ್ದಾರೆ.
ಸಿಡಿ ಫ್ಯಾಕ್ಟರಿ ಮಾಲೀಕರ ಯಾರು? ಎಳೂವರೆ ಕೋಟಿ ಮಹಾನ್ ವ್ಯಕ್ತಿ ಯಾರು? ಇಷ್ಟು ಸಿಡಿ ಮಾಡಿಸಿದ ಪುಣ್ಯಾತ್ಮ ಯಾರು ಅಂತ ಜನ ತಿಳಿಯಲು ಕಾಯುತ್ತಿದ್ದಾರೆ. ರಾಜಣ್ಣ ಅವರೇ ದೂರು ಕೊಡಿ. ಯಾಕೆ ಸತಾಯಿಸುತ್ತೀರಾ ಎಂದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಜವರಾಯಿಗೌಡ, ವಕ್ತರಾದ ಗಂಗಾಧರ್ ಮೂರ್ತಿ, ದೇವರಾಜು ಅವರು ಭಾಗಿಯಾಗಿದ್ದರು.