ಬೆಂಗಳೂರು: 18ನೇ ವಿಶ್ವ ಒಕ್ಕಲಿಗರ (vokkaligara) ಸಮ್ಮೇಳನವನ್ನು ಅಮೆರಿಕದ ಸ್ಯಾನ್ ಜೋಸೆ ನಗರದ ಕನ್ವೆನ್ನನ್ ಸೆಂಟರ್ ನಲ್ಲಿ ಜು.2ರಿಂದ 4ರವರೆಗೆ ನಡೆಸಲು ಸಿದ್ಧತೆ ಆರಂಭಗೊಂಡಿದೆ.
ಒಕ್ಕಲಿಗರ ಸಾಧನೆ-ಪರಿಶ್ರಮಗಳ ಕುರುಹಾಗಿ ‘ಉಳುತ ಸಾಗಿಹೆವು ಜಗವೆಂಬ ಹೊಲವನು’ ಎಂಬ ಶೀರ್ಷಿಕೆಯಡಿ ಸಜ್ಜುಗೊಳ್ಳುತ್ತಿರುವ ಈ ಸಮ್ಮೇಳನವು ವಿಶ್ವದ ಎಲ್ಲೆಡೆಯಿಂದ ಒಕ್ಕಲಿಗರನ್ನು ಆಕರ್ಷಿಸಲಿದೆ.
ಸುಮಾರು 1,200ಕ್ಕೂ ಹೆಚ್ಚು ಜನರನ್ನು ಒಗ್ಗೂಡಲಿಸಲಿದೆ. ಭಾರತ ಮತ್ತು ಅಮೆರಿಕ ಅಷ್ಟೇ ಅಲ್ಲದೆ, ಯುರೋಪ್, ಆಸ್ಟ್ರೇಲಿಯಾ, ಕೆನಡಾ, ದುಬೈ ಹಾಗೂ ಇನ್ನಿತರ ಭಾಗಗಳಲ್ಲಿರುವ ಒಕ್ಕಲಿಗರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸಾಂಸ್ಕೃತಿಕ ಉತ್ಸವಕ್ಕೆ ಭಾರತ ಹಾಗೂ ಅಮೆರಿಕದ ಕಲಾವಿದರಿಂದ ಭರ್ಜರಿ ಮನೋರಂಜನೆ ಕಾರ್ಯಕ್ರಮ ಗಳು, ಸವಿಯಾದ ಸಾಂಪ್ರದಾಯಿಕ ಔತಣ, ಬಾಂಧವ್ಯದ ಬೆಸುಗೆಯನ್ನು ಬಲಪಡಿಸುವ ಸ್ನೇಹಕೂಟಗಳು, ಸಂಸ್ಕೃತಿ-ಸಂಪ್ರದಾಯಗಳನ್ನು ತೋರಿಸುವ ಭವ್ಯ ಮೆರವಣಿಗೆ, ಮಕ್ಕಳಿಗೆ ಹಾಗೂ ಯುವಜನರಿಗೆ ಸ್ಫೂರ್ತಿ ನೀಡುವ ಚಟುವಟಿಕೆಗಳು, ಉದ್ಯಮಶೀಲರಿಗೆ ಉತ್ತೇಜನ ನೀಡುವ ಬ್ಯುಸಿನೆಸ್ ಫೋರಂ, ಸ್ತ್ರೀಶಕ್ತಿಗೆ ಪೂರಕವಾದ ಮಹಿಳಾ ವೇದಿಕೆ ಹೀಗೆ ವಿಭಿನ್ನ ರೀತಿಯ ಕಾರ್ಯಕ್ರಮ ಸಾಗಿದೆ.
ಸಮ್ಮೇಳನಕ್ಕೆ ಕರ್ನಾಟಕದಿಂದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಸೇರಿದಂತೆ 200ಕ್ಕೂ ಹೆಚ್ಚು ಗಣ್ಯರು, ಉದ್ಯಮಿಗಳು, ರಾಜಕಾರಣಿಗಳು, ಕಲಾವಿದರು, ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಲಿದ್ದಾರೆ.