ದೊಡ್ಡಬಳ್ಳಾಪುರ (Doddaballapura): ವಿಶ್ವ ಜಲ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸಮೀಪದ ಕೆರೆ ಅಭಿವೃದ್ಧಿಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬಿಸ್ಲೇರಿ ಕಂಪನಿಯವರು ಈ ಕೆರೆ ಅಭಿವೃದ್ಧಿಗೆ ಸುಮಾರು ರೂ.4 ಕೋಟಿ ಖರ್ಚು ಮಾಡುತ್ತಿದ್ದಾರೆ.
ಕೆರೆಯ ಅಭಿವೃದ್ಧಿಯಿಂದಾಗಿ ಘಾಟಿ ಕ್ಷೇತ್ರದಲ್ಲಿ ಪ್ರತಿ ವರ್ಷ ನಡೆಯುವ ದನಗಳ ಜಾತ್ರೆಗೆ ಬರುವ ರಾಸುಗಳಿಗೆ ಕುಡಿಯುವ ನೀರು, ರಾಸುಗಳಿಗೆ ಮೈತೊಳೆಯಲು ಅನುಕೂಲವಾಗಲಿದೆ. ಇದಲ್ಲದೆ ಘಾಟಿ ಕ್ಷೇತ್ರದಲ್ಲಿನ ಬೆಟ್ಟದ ಸಾಲಿನಲ್ಲಿ ಇರುವ ಕಾಡುಪ್ರಾಣಿಗಳಿಗೆ ಇಡೀ ವರ್ಷ ಕುಡಿಯಲು ನೀರು ದೊರೆಯಲಿದೆ ಎಂದರು.
ಜಿಲ್ಲಾಧಿಕಾರಿ ಎ.ಬಿ.ಬವರಾಜು ಮಾತನಾಡಿ, ಈಗ ಕೆರೆಯ ವಿಸ್ತೀರ್ಣ 8 ಎಕರೆಯಷ್ಟು ಇದೆ. ಕೆರೆಯ ಸುತ್ತಲೂ ಸರ್ಕಾರಿ ಜಮೀನು ಇರುವುದರಿಂದ ಕೆರೆಯನ್ನು ಮತ್ತಷ್ಟು ವಿಸ್ತೀರ್ಣಗೊಳಿಸಲಾಗುವುದು. ಹಾಗೆಯೇ ಕೆರೆ ಸಮೀಪದಲ್ಲೇ ದೇವಾಲಯಕ್ಕೆ ಸಂಬಂಧಿಸಿದಂತೆ ಜನರ ಧಾರ್ಮಿಕ ನಂಬಿಕೆಯ ಮರಗಳನ್ನು ಬೆಳೆಸಲು ಸ್ಥಳ ಗುರುತಿಸಲಾಗಿದೆ.
ಇತ್ತೀಚೆಗಷ್ಟೇ ಘಾಟಿ ದೇವಾಲಯ ಪ್ರಾಧಿಕಾರವು ರಚನೆಯಾಗಿರುವುದರಿಂದ ಇಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದರು.