ಬೆಂಗಳೂರು: ಈ ಮುಂಚೆಯೇ ಸದನದಿಂದ ಅಮಾನತು ಆದರೂ ಶಾಸಕರಿಗೆ ತಮ್ಮ ತಪ್ಪಿನ ಅರಿವು ಬಂದಿಲ್ಲ. ಇಂತಹ ವರ್ತನೆ ಸರಿಯಾಗಬೇಕು. ಅವರಿಗೆ ಶಿಸ್ತು ಕಲಿಸುವ ಪ್ರಯತ್ನ ಇದಾಗಿದೆ ಎಂದು 18 ಶಾಸಕರ ಅಮಾನತು ಆದೇಶದ ಕುರಿತು ವಿಧಾನಸಭೆ ಸ್ಪೀಕರ್ ಸಭಾಪತಿ ಯುಟಿ ಖಾದರ್ (UT Khader) ಸಮರ್ಥಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಸಭಾಪತಿ ಪೀಠದ ವಿರುದ್ಧ ಅನುಚಿತವಾಗಿ ವರ್ತಿಸಿದ ಕಾರಣ 18 ಶಾಸಕರ ಅಮಾನತಿನ ತೀರ್ಮಾನ ನೀಡಲಾಗಿದೆ. ಸದನಕ್ಕಿಂತ ದೊಡ್ಡದು ಯಾವುದು ಇಲ್ಲ. ಸದನ ಪಾವಿತ್ರ್ಯತೆ ಬಹಳ ಮುಖ್ಯ. ಗೆದ್ದು ಬಂದಾಗ ಪ್ರತಿಜ್ಞೆ ಮಾಡಿರುತ್ತೇವೆ. ಜನರ ಪರವಾಗಿ ಇರುತ್ತೇವೆ ಅಂತ ಪ್ರತಿಜ್ಞೆ ಮಾಡಿರ್ತೇವೆ ಎಂಬುದ ಮರೆತು ವರ್ತಿಸಬಾರದು. ಅವರ ನಡುವಳಿಕೆಯನ್ನು ಸರಿಪಡಿಸುವ ಸಲುವಾಗಿ ಈ ಆದೇಶವೇ ಹೊರತು ಸರ್ಕಾರದ ಒತ್ತಡಕ್ಕೆ ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಶಾಸಕರು ಸದನದ ಬಾವಿಗೆ ಪ್ರವೇಶಿಸುತ್ತಿದ್ದಂತೆ ಕರ್ನಾಟಕ ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದರು ಮತ್ತು ಸ್ಪೀಕರ್ ಕುರ್ಚಿಯ ಮುಂದೆ ಕಾಗದಗಳನ್ನು ಹರಿದು ಎಸೆದರು.
ಪೀಠಕ್ಕೆ ಅಗೌರವ ತೋರಿದಾಗ ಸಂವಿಧಾನದ ಗೌರವ ಕಾಪಾಡುವುದು ನನ್ನ ಕರ್ತವ್ಯ. ನಾನು ಸಂವಿಧಾನದ ಪರವಾಗಿ ನಿಂತಿದ್ದೇನೆ ಮತ್ತು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಡೆದದ್ದನ್ನೆಲ್ಲ ರಾಜ್ಯದ ಜನತೆ ನೋಡಿದ್ದಾರೆ.
ನಾನು ವಿರೋಧ ಪಕ್ಷದ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಸಾಕಷ್ಟು ಅವಕಾಶ ನೀಡಿದ್ದೇನೆ ಮತ್ತು ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷಕ್ಕೆ ಒಲವು ತೋರದೆ ತಟಸ್ಥವಾಗಿ ವರ್ತಿಸಿದೆ.
ಸಂವಿಧಾನದ ಅಡಿಯಲ್ಲಿ ಸಭಾಪತಿ ಸ್ಥಾನಕ್ಕೆ ಗೌರವ ಇದೆ. ಆದರೆ ಅದನ್ನು ಉಲ್ಲಂಘಿಸಿ ಅಗೌರವ ತೋರಿದವರಿಗೆ ತಪ್ಪನ್ನು ತಿದ್ದುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಮನವಿ ಸಲ್ಲಿಸಿದರೆ ಹಿಂಪಡೆಯುವಿರ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು ರಿಕ್ವೆಸ್ಟ್ ಮಾಡಿದ ನಂತರ ಚರ್ಚಿಸಬಹುದು. ನಾವು ತಪ್ಪು ಮಾಡಿದ್ದೇವೆ ಅನ್ನೋ ಭಾವನೆ ಅವರಿಗಿಲ್ಲ. ನಿನ್ನೆ 12 ರಿಂದ ಸಂಜೆ 4ರವರೆಗೂ ಅಲ್ಲೆ ಇದ್ದೆವು ಕನಿಷ್ಠ ಬಂದು ಏನೋ ಆಗಿದೆ ಎಂದು ಮಾತನಾಡಬೇಕೆಂಬ ಸೌಜನ್ಯ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎರಡನೇ ಬಾರಿ ಅಮಾನತು ಮಾಡಲಾಗಿದೆ ಎಂಬ ಪ್ರಶ್ನೆಗೆ. ಮತ್ತೆ ಈಗಾಗಲೇ ಅಮಾನತು ಆದರೂ ಅವರಿಗೆ ತಪ್ಪಿನ ಅರಿವು ಅವರಿಗೆ ಬರಬೇಕಿತ್ತಲ್ಲ..? ಬಂದಿದ್ದರೆ ಈ ಘಟನೆ ಆಗುತ್ತಿತ್ತೆ..? ಇಂತಹ ವರ್ತನೆ ಸರಿಯಾಗಬೇಕು. ಅವರಿಗೆ ಶಿಸ್ತು ಕಲಿಸುವ ಪ್ರಯತ್ನ ಇದಾಗಿದೆ.. ಇಲ್ಲವಾದರೆ ತಾಲೂಕು, ಜಿಲ್ಲಾ ಮಟ್ಟದ ಸಭೆಗಳಲ್ಲಿ ಇದೇ ರೀತಿ ಆಡ್ತಾರೆ ಎಂದು ತಮ್ಮ ತೀರ್ಮಾನವನ್ನು ಸಭಾಪತಿ ಸಮರ್ಥಿಸಿಕೊಂಡರು.