ದೊಡ್ಡಬಳ್ಳಾಪುರ (Doddaballapura): ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲೂಕು ಪದೇ ಪದೇ ಭ್ರಷ್ಟಾಚಾರ, ಅಪಘಾತ, ಸಾವು, ನೋವುಗಳಿಂದಲೇ ವ್ಯಾಪಕ ಸುದ್ದಿಯಾಗುತ್ತಿದೆ.
ಇದಕ್ಕೆ ಪೂರಕ ಎಂಬಂತೆ ತಾಲೂಕು ಕಚೇರಿ ಮೇಲೆ ಅನೇಕ ಬಾರಿ ಲೋಕಾಯುಕ್ತ ದಾಳಿ ನಡೆದಿದೆ. ಅಲ್ಲದೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾಗಿದೆ.
ಇದರ ಬೆನ್ನಲ್ಲೇ ಬುಧವಾರ ರಾತ್ರೋರಾತ್ರಿ ನಗರದ ಪಾಲನಜೋಗಹಳ್ಳಿಯ ಪ್ರಸಿದ್ಧ ಪಿಯು ಕಾಲೇಜು ಸಮೀಪದ ವ್ಯಕ್ತಿಯೋರ್ವನ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಚಿತ್ರದುರ್ಗದ ಅರಣ್ಯ ಅಧಿಕಾರಿ ಕಚೇರಿ ಅಂಟೆಂಡರ್ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಚಿತ್ರದುರ್ಗದ ಅರಣ್ಯ ಅಧಿಕಾರಿ ಕಚೇರಿ ಅಂಟೆಂಡರ್ ಗೋಪಾಲ ಎಂಬುವವರ ಸಹೋದರನ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಮನೆಯಲ್ಲಿ ಸಂಗ್ರಹಿಸಲಾಗಿದ್ದ ನಗದನ್ನು ಎಣಿಸಲು ಅಧಿಕಾರಿಗಳು ಕೌಂಟಿಂಗ್ ಮಷಿನ್ ತರಿಸಿ ಎಣಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸುಮಾರು ಮೂರು ಗಂಟೆವರೆಗೆ ನಡೆಸಲಾದ ಪರಿಶೀಲನೆಯಲ್ಲಿ 45 ಲಕ್ಷದ 500 ರೂ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.