ದೊಡ್ಡಬಳ್ಳಾಪುರ (Doddaballapura): ವಿಶ್ವ ಜಲ ದಿನದ ಅಂಗವಾಗಿ ಮಾರ್ಚ್ 22 ರಂದು ಬೆಳಿಗ್ಗೆ 06 ಗಂಟೆಗೆ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಪುನಶ್ಚೇತನ ಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಕೋರಿದ್ದಾರೆ.
ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ವರ್ಷದ ಘೋಷ ವಾಕ್ಯ ಹಿಮಪಾತ ಸಂರಕ್ಷಣೆ ಇದು ಹಿರಿ ನದಿಗಳನ್ನು ಸಂರಕ್ಷಿಸುವುದನ್ನು ಒತ್ತಿ ಹೇಳುತ್ತದೆ ಮತ್ತು ಪ್ರಮುಖ ಸಿಹಿ ನೀರಿನ ಮೂಲಗಳನ್ನು ರಕ್ಷಿಸಲು ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಮತ್ತು ಭವಿಷ್ಯದ ಪೀಳಿಗೆಗೆ ನೀರಿನ ಸಂರಕ್ಷಣೆಯನ್ನು ಖಚಿತ ಪಡಿಸಿಕೊಳ್ಳಲು ಹವಾಮಾನ ಬದಲಾವಣೆಯ ವಿರುದ್ಧ ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ ಪ್ರಾಮುಖ್ಯತೆಯನ್ನು ನೀಡುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ 98 ಕೆರೆಗಳು, ಜಿಲ್ಲಾ ಪಂಚಾಯಿತಿಯಡಿ 612 ಕೆರೆಗಳು ಸೇರಿ ಒಟ್ಟು 710 ಕೆರೆಗಳು ಇದೆ. 87 ಕಲ್ಯಾಣಿ, 146 ಕುಂಟೆ, 82 ಗೋಕಟ್ಟೆ, 36 ಕಟ್ಟೆಗಳು ಸೇರಿ ಒಟ್ಟು 356 ಸಂಪ್ರದಾಯಿಕ ನೀರು ಸಂಗ್ರಹಣ ಮೂಲಗಳಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಿನ ಕೆರೆಗಳು ಮತ್ತು ಸಂಪ್ರದಾಯಿಕ ನೀರು ಸಂಗ್ರಹಣ ವ್ಯವಸ್ಥೆಗಳು ಇರುವುದರಿಂದ ಸಾಮಾನ್ಯವಾಗಿ ತಂಪು ವಾತಾವರಣ ಇರಬೇಕಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನೀರಿನ ಸಂಗ್ರಹಣ ವ್ಯವಸ್ಥೆಗಳು ವಿವಿಧ ಕಾರಣಗಳಿಂದಾಗಿ ಕ್ಷೀಣಿಸುತ್ತಿರುವುದರಿಂದ ಜಿಲ್ಲೆಯಲ್ಲಿ ತಾಪಮಾನ ಹೆಚ್ಚುತ್ತಿರುವುದನ್ನು ಗಮನಿಸಬಹುದಾಗಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ನಗರಾಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ಜಿಲ್ಲೆಯಲ್ಲಿರುವ ಕೆರೆ, ಕಲ್ಯಾಣಿ ಕುಂಟೆಗಳನ್ನು ಪುನಃಚೇತನ ಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಜನತೆ ಕಾರ್ಯಕ್ರಮದಲ್ಲಿ ಜೊತೆಯಾಗಿ ಕೆರೆ, ಕಲ್ಯಾಣಿ, ಕುಂಟೆಗಳನ್ನು ಸ್ವಚ್ಚಗೊಳಿಸಿ ಪುನಶ್ಚೇತನಗೊಳಿಸಲು ಸಹಕರಿಸಿ ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.