ದೊಡ್ಡಬಳ್ಳಾಪುರ (Doddaballapura): ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿನ ವಾಸ್ತವ ಸ್ಥಿತಿ ವೀಕ್ಷಣೆ ಮಾಡುವ ಮೂಲಕ ಹೈಕೋರ್ಟ್ಗೆ ವರದಿ ನೀಡಲು ಬುಧವಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಭೋಲಾ ಪಂಡಿತ್ ಅವರು ಭೇಟಿ ನೀಡಿದ್ದರು.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಿಬಿಎಂಪಿ ಕಸ ವಿಲೇವಾರಿ ಘಟಕ ಎಂಎಸ್‌ಜಿಪಿಗೆ ಭೇಟಿ ನೀಡಿ ಕಸ ವಿಗಂಡಣೆ, ಬಯಲಿನಲ್ಲಿ ಕಸದ ರಾಶಿ ಹಾಕಿರುವ ಸ್ಥಳ, ಕಸದ ರಾಶಿಯಿಂದ ಹೊರಬಹುವ ತ್ಯಾಜ್ಯ ನೀರು ಸಂಗ್ರಹವಾಗುವ ಕುಂಟೆ,ಕಸವನ್ನು ಗೊಬ್ಬರವಾಗಿ ಪರಿರ್ವತಿಸುವ ಯಂತ್ರಗಳ ಕಾರ್ಯಚರಣೆ ಹಾಗೂ ತ್ಯಾಜ್ಯ ನೀರನ್ನು ಸಂಸ್ಕರಿಸುವ ಸ್ಥಳಕ್ಕು ಭೇಟಿ ನೀಡಿ ಮಾಹಿತಿ ಪಡೆದರು.
ಗ್ರಾಮಕ್ಕೆ ಭೇಟಿ:
ಕಸದ ರಾಶಿಯಿಂದ ಹೆಚ್ಚು ತೊಂದರೆಗೆ ಸಿಲುಕಿರುವ ತಣ್ಣೀರನಹಳ್ಳಿ, ಮೂಡ್ಲಕಾಳೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ್ದ ನ್ಯಾಯಾಧೀಶರು, ಗ್ರಾಮದ ಮಹಿಳೆಯರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ಕಸದ ರಾಶಿಯಿಂದ ಹೊರಬರುತ್ತಿರುವ ದುರ್ನಾಥ, ಮಳೆಗಾಲದಲ್ಲಿ ಕಸದ ರಾಶಿಯಿಂದ ಹಳ್ಳದ ಮೂಲಕ ಹರಿದು ಬರುವ ತ್ಯಾಜ್ಯ ನೀರಿನ ಸಮಸ್ಯೆ, ಅಂತರ್ಜಲ ಕಲುಷಿತಗೊಂಡು ಕುಡಿಯುವ ನೀರಿಗು ತತ್ವಾರ ಉಂಟಾಗಿರುವುದು, ಅನಾರೋಗ್ಯಕ್ಕೆ ತುತ್ತಾಗಿರುತ್ತಿರುವ ಬಗ್ಗೆ ಗ್ರಾಮದ ಮಹಿಳೆಯರು ನ್ಯಾಯಾಧೀಶರ ಗಮನಕ್ಕೆ ತಂದರು.
ಪಿಐಎಲ್ ಸಲ್ಲಿಕೆ
ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆಗುತ್ತಿರುವ ತೊಂದರೆಗಳ ಕುರಿತು ಹೈಕೋರ್ಟ್ಗೆ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಶ್ರೀನಿವಾಸ್ ಅವರು ನ್ಯಾಯಾಧೀಶರ ಭೇಟಿ ಕುರಿತು ಮಾಹಿತಿ ನೀಡಿ, ಬಿಬಿಎಂಪಿ ಇಲ್ಲಿಗೆ ತಂದು ರಾಶಿ ಹಾಕುರುತ್ತಿರುವ ಕಸದಿಂದ ಜನ,ಜಾನುವಾರು ಹಾಗೂ ಪರಿಸರಕ್ಕೆ ಆಗುತ್ತಿರುವ ತೊಂದರೆಗಳ ಕುರಿತು ದೂರುಸಲ್ಲಿಸಲಾಗಿದೆ. ಇದರ ಸತ್ಯಾಸತ್ಯತೆಯನ್ನು ಅರಿಯಲು ಹೈಕೋರ್ಟ್ ಸೂಚನೆಯಂತೆ ನ್ಯಾಯಾಧೀಶರು ಬುಧವಾರ ಭೇಟಿ ನೀಡಿದ್ದಾರೆ. ನ್ಯಾಯಾಧೀಶರು ಗ್ರಾಮಗಳಿಗೆ ಭೇಟಿ ನೀಡಿದ್ದ ಸಮಯದಲ್ಲೂ ಕಸದ ರಾಶಿಯಿಂದ ತಾವು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಜನರು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ನ್ಯಾಯ ನಮ್ಮ ಪರವಾಗಿರಲಿದೆ ಎನ್ನುವ ವಿಶ್ವಾಸ ಇದೆ ಎಂದರು.
ಸ್ಥಳೀಯರ ಪ್ರವೇಶ ನಿರ್ಬಂಧ:
ನ್ಯಾಯಾಧೀಶರು ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡುತ್ತಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಸ್ಥಳೀಯರನ್ನು ಕಸ ವಿಲೇವಾರಿ ಘಟಕಕ್ಕೆ ಪ್ರವೇಶ ನೀಡದೆ ಪೊಲೀಸರು ಗೇಟ್ನಲ್ಲಿಯೇ ತಡೆದಿದ್ದರು.
ಸಾಲುಗಟ್ಟಿ ನಿಂತ ಲಾರಿಗಳು
ನ್ಯಾಯಾಧೀಶರು ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ಬುಧವಾರ ಭೇಟಿ ನೀಡಿದ್ದರಿಂದ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬುಕೊಂಡ ಬಂದಿದ್ದ ನೂರಾರು ಲಾರಿಗಳನ್ನು ಕಸ ವಿಲೇವಾರಿ ಘಟಕದ ಒಳಗೆ ಹೋಗದಂತೆ ತಡೆಯಲಾಗಿತ್ತು. ಹಾಗಾಗಿ ಕಸ ವಿಲೇವಾರಿ ಘಟಕಕ್ಕೆ ಹೋಗುವ ಗುಂಡ್ಲಹಳ್ಳಿ ಸಮೀಪದ ರಸ್ತೆಯುದ್ದಕ್ಕೂ ಮಧ್ಯಾಹ್ನ 2 ಗಂಟೆವರೆಗೂ ಸಾಲುಗಟ್ಟಿ ನಿಂತಿದ್ದವು.