ದೊಡ್ಡಬಳ್ಳಾಪುರ (Doddaballapura): ತಾಲ್ಲೂಕಿನ ಮಧುರೆ ಹೋಬಳಿ ಕನಸವಾಡಿಯಲ್ಲಿ ನಡೆಯುವ ಬೆಂಗಳೂರು ಗ್ರಾಮಾಂತರ ಜಿಲ್ಲಾ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ, ಖ್ಯಾತ ಛಾಯಾಚಿತ್ರ ಕಲಾವಿದ, ಸಾಕ್ಷ್ಯಚಿತ್ರ ನಿರ್ದೇಶಕ ಟಿ.ಕೆಂಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಭೆಯಲ್ಲಿ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಹೆಸರನ್ನು ಪ್ರಕಟಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಖ್ಯಾತ ಕಲಾವಿದ ಹಾಗೂ ಸಾಕ್ಷ್ಯಚಿತ್ರಗಳ ನಿರ್ದೇಶಕ ಮತ್ತು ಪ್ರವೃತ್ತಿಯಲ್ಲಿ ಛಾಯಾಗ್ರಹಣವನ್ನು ಒಲಿಸಿಕೊಂಡಿರುವ ಟಿ.ಕೆಂಪಣ್ಣ ದೊಡ್ಡಬಳ್ಳಾಪುರ ತಾಲ್ಲೂಕು ಟಿ.ಚನ್ನಾದೇವಿ ಅಗ್ರಹಾರ ಗ್ರಾಮದವರು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಕೋಶಾಧ್ಯಕ್ಷ ಡಾ.ಮುನಿರಾಜು, ಸಂಘಟನಾ ಕಾರ್ಯದರ್ಶಿಗಳಾದ ಶರಣಯ್ಯ ಹಿರೇಮಠ, ಚಂದ್ರಶೇಖರ್, ದೊಡ್ಡಬಳ್ಳಾಪುರ ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು.
ನೆಲಮಂಗಲ ತಾಲ್ಲೂಕು ಅಧ್ಯಕ್ಷ ಪ್ರಕಾಶಮೂರ್ತಿ, ಮಧುರೆ ಹೋಬಳಿ ಘಟಕದ ಅಧ್ಯಕ್ಷ ಜಿ.ಸುರೇಶ್,ಪ್ರತಿನಿಧಿ ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.
ಬಹುಮುಖ ಪ್ರತಿಭೆಯ: ಟಿ.ಕೆಂಪಣ್ಣ
ಮನುಷ್ಯ ಕಂಡುಕೊಂಡ ಕಲಾತ್ಮಕ ಅಭಿವ್ಯಕ್ತಿಗಳಲ್ಲಿ ಛಾಯಾಗ್ರಹಣವೂ ಒಂದು. ಮಾತು ತೇಲಿ ಹೋದೀತು, ಬರವಣಿಗೆಯು ಅರ್ಥವಾಗದೆ ಉಳಿದೀತು, ಆದರೆ ಛಾಯಾಚಿತ್ರವು ಮಾತ್ರ ಎಲ್ಲೋ ನಡೆದ ಘಟನೆಯನ್ನು ಮತ್ತೆ ನಮ್ಮ ಕಣ್ಣ ಮುಂದೆ ಜೀವಂತ ತೋರಿಸುವ ಅನನ್ಯ ಸಾಮರ್ಥ್ಯ ಹೊಂದಿದೆ.
ಈ ಮೂಲಕ ಜಗತ್ತಿನ ಹಲವು ಅಪರೂಪದ ಪ್ರಕರಣಗಳನ್ನು ಹಲವು ತಲೆಮಾರುಗಳ ನಂತರ ಇಂದಿಗೂ ಕಾಣಲು ಸಾಧ್ಯವಾಗಿದೆ. ಇಂಥ ಪ್ರಭಾವಿ ದೃಶ್ಯ ಮಾಧ್ಯಮವನ್ನು ಹಿರಿಯ ಛಾಯಾಗ್ರಾಹಕ ಟಿ.ಕೆಂಪಣ್ಣ ಬದುಕಿನ ಮುಖ್ಯ ಪ್ರವೃತ್ತಿಯಾಗಿ ಸ್ವೀಕರಿಸಿದವರು ಎನ್ನುವುದು ವಿಶೇಷ.
ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ‘ಛಾಯಾ ಮತ್ತು ಚಲನಚಿತ್ರ’ ಅಧಿಕಾರಿಯಾಗಿ ಹಲವು ವರ್ಷಗಳ ಕಾಲ ಕೆಂಪಣ್ಣ ಅವರು ಸೇವೆ ಸಲ್ಲಿಸಿದ್ದಾರೆ.
ಸರ್ಕಾರ ಜಾರಿಗೆ ತರುವ ಕಲ್ಯಾಣ ಯೋಜನೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವುದರೊಂದಿಗೆ ನಾಗರಿಕರಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸುವ ನಿಟ್ಟಿನಲ್ಲಿಯೂ ಅವರು ಶ್ರಮಿಸಿದ್ದಾರೆ.
ಇವರು ಸ್ವತಃ ಚಿತ್ರಕಥೆ ಬರೆದು ನಿರ್ದೇಶಿಸಿದ ಸುಮಾರು 25 ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳು ದೂರದರ್ಶನದಲ್ಲಿ ಪ್ರಸಾರವಾಗಿವೆ.
ಸರ್ಕಾರದ ಉದ್ಯೋಗದಿಂದ ನಿವೃತ್ತರಾದ ಮೇಲೆ ಹವ್ಯಾಸಿ ಛಾಯಾಗ್ರಾಹಕರಾಗಿ ಕರ್ನಾಟಕದ ಹಲವು ಪ್ರವಾಸಿ ಮತ್ತು ಐತಿಹಾಸಿಕ ಸ್ಥಳಗಳನ್ನು ಸುತ್ತಾಡಿದರು.
ಬಾದಾಮಿ, ಪಟ್ಟದಕಲ್ಲು, ಹೈಹೊಳೆ, ಹಂಪಿ ಹಾಗೂ ಶ್ರವಣಬೆಳಗೊಳ ಸೇರಿದಂತೆ ಹಲವು ಸ್ಮಾರಕಗಳ ಅತ್ಯಾಕರ್ಷಕ ಛಾಯಾಚಿತ್ರಗಳನ್ನು ತಮ್ಮ ಕ್ಯಾಮೆರಾ ಮೂಲಕ ಸೆರೆಹಿಡಿದರು ಐತಿಹಾಸಿಕ ಸ್ಥಳಗಳ ಬಗ್ಗೆ ಜನರ ಗಮನ ಸೆಳೆಯಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸಿದರು.
‘ಕಲ್ಲರಳಿ ಕಲೆಯಾಗಿ’ ಹಾಗೂ ‘ಕರ್ನಾಟಕದ ಪ್ರಾಚೀನ ದೇವಾಲಯಗಳು’ ಶೀರ್ಷಿಕೆಯಡಿ ವಿವಿಧೆಡೆ ಛಾಯಾಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿದ್ದರು.
‘ಕರ್ನಾಟಕದ ರಾಜಮನೆತನಗಳು ವಾಸ್ತುಶಿಲ್ಪ ಪರಂಪರೆಗೆ ನೀಡಿರುವ ಕೊಡುಗೆಗಳ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವುದು ನನ್ನ ಉದ್ದೇಶ’ ಎಂದು ಕೆಂಪಣ್ಣ ಅವರು ವಿನಯದಿಂದ ಹೇಳುತ್ತಾರೆ.
ಕೆಂಪಣ್ಣ ಅವರು ತೆಗೆದ 1,500 ಕ್ಕೂ ಹೆಚ್ಚು ಛಾಯಾಚಿತ್ರಗಳು ವಿಶ್ವಮಟ್ಟದ ಹಲವು ಸ್ಪರ್ಧೆಗಳಲ್ಲಿ ಮಾನ್ಯತೆ ಪಡೆದಿವೆ. ಇಂಗ್ಲೆಂಡ್‌ನ ರಾಯಲ್ ಫೋಟೊಗ್ರಪಿಕ್ ಸೊಸೈಟಿ, ಭಾರತದ ಫೆಲೊ ಆಫ್ ಫೆಡರೇಶನ್ ಆಫ್ ಇಂಡಿಯನ್ ಫೋಟೊಗ್ರಫಿ, ಫ್ರಾನ್ಸ್‌ನ ಫೆಡರೇಶನ್ ಆಫ್ ಇಂಟರ್‌ನ್ಯಾಷನಲ್ ಆರ್ಟ್ ಫೋಟೊಗ್ರಫಿ, ಅಮೆರಿಕದ ಫೋಟೊಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಕೆಂಪಣ್ಣ ಅವರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ಸ್ವಚ್ಛ ಭಾರತ್ ಅಭಿಯಾನ’ ಯೋಜನೆಗೆ ಸಂಬಂಧಿಸಿದಂತೆ ಕೆಂಪಣ್ಣ ಅವರು ರೂಪಿಸಿದ ‘ಲಾವಣ್ಯ – ಎ ಡ್ರೀಮ್ ಕಮ್ ಟ್ರೂ’ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ.
ಮಂಡ್ಯ ಜಿಲ್ಲೆ ಕಾಮೇಗೌಡರ ಮಳೆನೀರು ಸಂರಕ್ಷಣೆ ಪ್ರಯತ್ನದ ಕುರಿತು ನಿರ್ದೇಶಿಸಿರುವ ‘ಕಾಮೇಗೌಡ – ಎ ಯೂನಿಕ್ ರೋಲ್ ಮಾಡೆಲ್’ ಇವರ ‘ಸೈನ್ಸ್ ಮಿರಾಕಲ್ಸ್’ ಹಾಗೂ ‘ಗ್ರಾಮ ಸ್ವರಾಜ್ಯ’ ಸಾಕ್ಷ್ಯಚಿತ್ರಕ್ಕೂ ರಾಷ್ಟ್ರೀಯ ಮಾನ್ಯತೆ ದೊರೆತಿದೆ.