ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ (Suicide) ಮಾಡಿಕೊಂಡ ಕೈಮಗ್ಗ ನೇಕಾರರಿಗೆ 5 ಲಕ್ಷ ಪರಿಹಾರ ಕೊಡುವ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡಲಾಗುತ್ತದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದಾರೆ.
ಪರಿಷತ್ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಕಷ್ಟಕ್ಕೆ ಸಿಲುಕಿರುವ ನೇಕಾರರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ ಪರಿಹಾರ ಕೊಡುವ ಕೆಲಸ ಸರಕಾರ ಮಾಡಬೇಕು.
ಬರ, ಕರೋನಾ, ಮೈಕ್ರೋ ಫೈನಾನ್ಸ್ ಸೇರಿ ಹಲವು ಸಮಸ್ಯೆ ಯಿಂದ ನೇಕಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರ ಹೆಂಡತಿಗೆ ಪಿಂಚಣಿ ಕೊಡಿ. ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು.
ನೇಕಾರರು ಆತ್ಮಹತ್ಯೆ ಮಾಡಿಕೊಂಡರೆ ಅವರಿಗೆ ಪರಿಹಾರ ಕೊಡಲು ಪರಿಹಾರ ನಿಧಿ ಪ್ರಾರಂಭ ಮಾಡಬೇಕು ಅಂತ ಒತ್ತಾಯ ಮಾಡಿದರು.
ಇದಕ್ಕೆ ಸಚಿವ ಶಿವಾನಂದ ಪಾಟೀಲ್ ಉತ್ತರ ನೀಡಿ, 5 ವರ್ಷಗಳಲ್ಲಿ 51 ಜನ ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ ಪರಿಹಾರ ನೀಡಲು ಯಾವುದೇ ಯೋಜನೆ ಇಲ್ಲ. ಅದಾಗ್ಯೂ 2020-21, 2021-22 ರಲ್ಲಿ 25 ರೈತರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರು. ಪರಿಹಾರ ನೀಡಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ನೇಕಾರ ಪತ್ನಿಗೆ ಪಿಂಚಣಿ ನೀಡುವ, ಅವರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಯೋಜನೆ ಇಲ್ಲ.
ಕರೋನಾ ಸಮಯದಲ್ಲಿ ಮೃತ ರಾದ ನೇಕಾರರಿಗೆ ಪರಿಹಾರ ಕೊಡುವ ಕೆಲಸ ಆಯಿತು. ಆತ್ಮಹತ್ಯೆ ಮಾಡಿಕೊಂಡ 25 ಜನರಿಗೆ ಮಾತ್ರ ಪರಿಹಾರ ಕೊಡಲಾಗಿತ್ತು. ಉಳಿದವರಿಗೆ ಸಿಎಂ ಅವರು ಪರಿಹಾರ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.