ದೊಡ್ಡಬಳ್ಳಾಪುರ (Doddaballapura): ಸರ್ಕಾರಿ ಕಚೇರಿಗಳಲ್ಲಿ ವಾರದ ದಿನಗಳಲ್ಲಿಯೇ ಅನೇಕ ನೌಕರರು ಕೆಲಸ ಮಾಡದೇ ಓತ್ಲಾ ಹೊಡಿತಾರೆ ಎಂಬುದು ಸಾರ್ವಜನಿಕರ ಆರೋಪ, ಅಂತದ್ರಲ್ಲಿ ಇಲ್ಲೊಂದು ಸರ್ಕಾರಿ ಕಚೇರಿ ಭಾನುವಾರ ಕೂಡ ಕಾರ್ಯ ನಿರ್ವಹಿಸುವ ಮೂಲಕ ಜನರ ಗಮನ ಸೆಳೆಯುತ್ತಿದೆ.
ಹೌದು ದೊಡ್ಡಬಳ್ಳಾಪುರ ನಗರದ ಇಂದಿರಾ ಕ್ಯಾಂಟಿನ್ ಬಳಿ ಕಾರ್ಯ ನಿರ್ವಹಿಸುತ್ತಿರುವ ಪಶು ಆಸ್ಪತ್ರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಭಾನುವಾರ ಕೂಡ ಬಾಗಿಲು ತೆರೆದಿರುತ್ತದೆ.
ಸಹಾಯಕ ನಿರ್ದೇಶಕ, ಮುಖ್ಯ ಪಶು ವೈದ್ಯಾಧಿಕಾರಿ ಎಸ್.ವಿಶ್ವನಾಥ್ ನೇತೃತ್ವದ ಇಲ್ಲಿನ ಸಿಬ್ಬಂದಿಗಳು ಭಾನುವಾರ ಕೂಡ ಜಾನುವಾರುಗಳಿಗೆ ಉಂಟಾಗುವ ತುರ್ತು ಅನಾರೋಗ್ಯಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ.
ಈ ಕುರಿತು ಓದುಗರ ಮಾಹಿತಿ ಮೇರೆಗೆ ಹರಿತಲೇಖನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅಧಿಕಾರಿಗಳು ಪಾಳಿಯ ಮೇಲೆ ಇಲ್ಲಿ ಭಾನುವಾರ ಕೂಡ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರ್ಯನಿರತರಾಗಿದ್ದಾರೆ.
ಪಶು ಆಸ್ಪತ್ರೆ ಎಂದರೆ ಮೂಗು ಮುರಿಯುವ ಸಂದರ್ಭದಲ್ಲಿ ಡಾ.ವಿಶ್ವನಾಥ್ ನೇತೃತ್ವದ ಇಲ್ಲಿನ ಅಧಿಕಾರಿಗಳು, ಆಸ್ಪತ್ರೆಗೆ ಹಿಟಾಚಿ ಆಸ್ತೆಮೊ ಫೈ ಪ್ರೈವೇಟ್ ಲಿ., ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಕೊಠಡಿಗಳ ನವೀಕರಣ, ಸಣ್ಣ ಪ್ರಾಣಿಗಳ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಪರಿಕರಗಳನ್ನು ದೊರಕಿಸಿದ್ದಾರೆ.
ಅಲ್ಲದೆ ಸರ್ಕಾರದಿಂದ ರೈತರಿಗೆ ದೊರಕುವ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಸವಿವರವಾದ ಮಾಹಿತಿ ನೀಡಲು ಇಲ್ಲಿನ ಅಧಿಕಾರಿಗಳಿಗೆ ತಾಳ್ಮೆ ಎಂಬುದು ಬಹಳಷ್ಟಿದೆ.
ಒಟ್ಟಾರೆ ರೈತರು, ಪ್ರಾಣಿ ಪ್ರಿಯರ ತುರ್ತು ಸಂದರ್ಭಗಳಿಗೆ ಚಿಕಿತ್ಸೆ ನೀಡಲು ದೊಡ್ಡಬಳ್ಳಾಪುರದ ಪಶು ಆಸ್ಪತ್ರೆ ಭಾನುವಾರವೂ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ.