ದೊಡ್ಡಬಳ್ಳಾಪುರ (Doddaballapura): ಹಳ್ಳಕ್ಕೆ ಬಿದ್ದ ಬೆಂಕಿ ಮನೆಗೆ ವ್ಯಾಪಿಸಿ ವಾಸದ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಹೊಸಹಳ್ಳಿಯಲ್ಲಿ ಸಂಭವಿಸಿದೆ.
ರಾಮಕ್ಕ ಎನ್ನುವವರ ಮನೆ ಇದಾಗಿದ್ದು, ಇಂದು ಮನೆಯ ಮಾಲೀಕರು ಹೊಲಕ್ಕೆ ತೆರಳಿದ್ದು, ಶನಿವಾರವಾದ ಕಾರಣ ಐದು ಮಂದಿ ಮಕ್ಕಳು ಶಾಲೆ ಮುಗಿಸಿ ಮನೆಗೆ ಬಂದಿದ್ದು, ಮನೆಯೊಳಗೆ ಆಟವಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಹಳ್ಳಕ್ಕೆ ಬಿದ್ದ ಬೆಂಕಿ ಮನೆಗೆ ವ್ಯಾಪಿಸಿದ್ದು, ಇದನ್ನು ಕಂಡ ಅಕ್ಕಪಕ್ಕದ ಮನೆಯವರು ಮಕ್ಕಳನ್ನು ಹೊತ್ತುಕೊಂಡು ಹೊರಗೆ ಓಡಿಬಂದಿದ್ದಾರೆ.
ಬಳಿಕ ಅಗ್ನಿಶಾಮಕ ಸಿಬ್ಬಂದಿಗಳಿಗೆ ಕರೆ ಮಾಡಿದ್ದು, ಅವರು ಬರುವ ವೇಳೆ ಬೆಂಕಿ ವ್ಯಾಪಕವಾಗಿ ಮನೆಗೆ ಹರಡಿ ಮನೆಯಲ್ಲಿದ್ದ ವಸ್ತುಗಳನ್ನು ಸುಟ್ಟು ಭಸ್ಮವಾಗಿಸಿದೆ.
ಘಟನೆಯಿಂದ ಲಕ್ಷಾಂತರ ರೂ ವಸ್ತುಗಳು, ದಾಖಲೆಗಳು ಬೆಂಕಿಗೆ ಆಹುತಿಯಾಗಿದ್ದು, ಬಡ ಕುಟುಂಬ ಬೀದಿಗೆ ಬಿದ್ದಂತಾಗಿದೆ.