ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಪ್ರಸಿದ್ಧ ನಿವೃತ್ತ ಶಿಕ್ಷಕರಾದ ಎ.ಬೈರಪ್ಪ ರೆಡ್ಡಿ ಅವರು ನಿಧನರಾಗಿದ್ದಾರೆ. ಮೃತರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಮಡದಿ, ಓರ್ವ ಮಗ ಹಾಗೂ ಮೂವರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ.
ಎ.ಬೈಯಪ್ಪ ರೆಡ್ಡಿ ಅವರ ಅಂತಿಮ ಇಚ್ಚೆಯಂತೆ ಅವರ ದೇಹವನ್ನು ಬೆಂಗಳೂರಿನ ESI ಆಸ್ಪತ್ರೆಗೆ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಅಂತಿಮ ದರ್ಶನ ಸಲ್ಲಿಸಲು ನಾಳೆ (ಭಾನುವಾರ) ತುಮಕೂರಿನ ಸ್ವಗೃಹ ಅಮರಜ್ಯೋತಿ ನಗರದಲ್ಲಿ ಬೆಳಿಗ್ಗೆ 9ರಿಂದ ಸಂಜೆ 3 ಗಂಟೆವರೆಗೂ ಅವಕಾಶ ಕಲ್ಪಿಸಲಾಗಿದೆ.
ಹೆಚ್.ನರಸೀಯಪ್ಪ ಕಂಬನಿ
ದೊಡ್ಡಬಳ್ಳಾಪುರ ತಾಲೂಕಿನ ಆರೂಢಿಯ ಶ್ರೀ ಅರವಿಂದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಎ.ಬೈರಪ್ಪರೆಡ್ಡಿ ಅವರ ಅಗಲಿಕೆಗೆ ಶ್ರೀ ಕೋಡಿ ಮಲ್ಲೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಹೆಚ್.ನರಸೀಯಪ್ಪ ಅವರು ಕಂಬನಿ ಮಿಡಿದಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಹುಕಾಲದ ಮಿತ್ರ ಬೈರಪ್ಪ ರೆಡ್ಡಿ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಸುಮಾರು 45 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಉಳಿಸಿದವರು. ಬರಹಗಾರರಾಗಿ, ವಿಮರ್ಶಕರಾಗಿ, ಸಾಹಿತಿಗಳಾಗಿ, ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದು ಸಾರ್ಥಕ ಜೀವನ ನಡೆಸಿದ್ದು ಹೆಮ್ಮೆಯ ಸಂಗತಿ.
ಆರೂಢಿಯ ಕೋಡಿಮಲ್ಲೇಶ್ವರ ವಿದ್ಯಾ ಸಂಸ್ಥೆ ಆರಂಭದಿಂದ ಶ್ರೀ ಅರವಿಂದ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಶಿಸ್ತಿನ ಸಿಪಾಯಿಯಂತೆ ವಿದ್ಯಾರ್ಥಿಗಳ ಜೀವನ ರೂಪಿಸಿದ್ದಾರೆ.
ಆರೂಢಿ ಸುತ್ತಮುತ್ತಲಿನ ಅವರ ಅಸಂಖ್ಯಾತ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಎಬಿಆರ್ ಅಗಲಿಕೆ ಎಲ್ಲರಿಗೂ ದಿಗ್ಭ್ರಾಂತಿಯನ್ನು ಉಂಟು ಮಾಡಿದೆ.
ಬೈರಪ್ಪ ರೆಡ್ಡಿ ಅವರು ತನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡುವಂತ ಇಚ್ಚೆಯ ಮೂಲ ಸಾವಿನಲ್ಲೂ ಕೂಡ ಸಮರ್ಥಕತೆ ಮೆರೆದಿರುವುದು ಮಾದರಿ ಕಾರ್ಯ, ಅವರ ಆತ್ಮಕ್ಕೆ ಭಗವಂತ ಮುಕ್ತಿಯನ್ನು ನೀಡಲಿ, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಧೈರ್ಯ ನೀಡಲಿ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.