Daily story; ಒಮ್ಮೆ ಸ್ವಾಮೀ ವಿವೇಕಾನಂದರು ಅಮೇರಿಕಾದ ಚಿಕಾಗೊ ಪಟ್ಟಣದ ನದಿಯ ತೀರದಲ್ಲಿ ವಿಹರಿಸುತ್ತಿದ್ದರು.
ಆಗ ಅವರಿಗೆ ಕೆಲವು ಹುಡುಗರು ಕೋವಿಯನ್ನು ಹಿಡಿದು ನದಿಯಲ್ಲಿ ತೇಲುತ್ತಿರುವ ಮೊಟ್ಟೆಯ ಚಿಪ್ಪನ ಮೇಲೆ ಗುರಿಯಿಡಲು ಪ್ರಯತ್ನಿಸುತ್ತಿರುವುದು ಕಂಡಿತು. ಆದರೆ ಅಲೆಗಳಿಂದ ಮೊಟ್ಟೆಯ ಚಿಪ್ಪು ಮೇಲೆ ಕೆಳಗೆ ತಿರುಗುತ್ತಿದ್ದರಿಂದ ಅವರಿಗೆ ಗುರಿಯಿಡಲು ಸಾಧ್ಯವಾಗಲ್ಲಿಲ್ಲ. ಬಹಳಷ್ಟು ಬಾರಿ ಪ್ರಯತ್ನಿಸಿಯೂ ಅವರಿಂದ ಮೊಟ್ಟೆಯ ಚಿಪ್ಪಿನ ಮೇಲೆ ಗುರಿಯಿಡಲು ಸಾಧ್ಯವಾಗಲಿಲ್ಲ.
ಸ್ವಾಮೀವಿವೇಕಾನಂದರು ಅವರ ಆಟವನ್ನು ಕೂತೂಹಲದಿಂದ ನಿಂತು ನೋಡುತ್ತಿದ್ದರು. ಆಗ ಹುಡುಗರು ಅವರನ್ನು ನೋಡಿ ’ಸರ್, ನೀವು ನಮ್ಮನ್ನು ಆಗಿನಿಂದ ನೋಡುತ್ತಿದ್ದೀರಿ, ನೀವು ಒಂದು ಬಾರಿ ಪ್ರಯತ್ನಿಸುವಿರೇ ?” ಎಂದು ಕೇಳಿದರು.
ಸ್ವಾಮಿ ವಿವೇಕಾನಂದರು ನಗುತ್ತ ತಾನು ಪ್ರಯತ್ನಿಸಲು ಇಚ್ಛಿಸುವುದಾಗಿ ತಿಳಿಸಿದರು. ಸ್ವಾಮಿಗಳು ಬಂದೂಕನ್ನು ಕೈಗೆತ್ತಿಕೊಂಡು ಮೊಟ್ಟೆಯ ಚಿಪ್ಪಿಗೆ ಗುರಿಯಿಟ್ಟು ಅದನ್ನು ಸ್ವಲ್ಪ ಸಮಯ ಏಕಾಗ್ರತೆಯಿಂದ ನೋಡಿದರು.
ಅನಂತರ ಅವರು 12 ಬಾರಿ ಗುಂಡು ಹೊಡೆದಾಗ ಪ್ರತಿಬಾರಿಯೂ ಅದು ಒಂದೊಂದು ಮೊಟ್ಟೆಯ ಚಿಪ್ಪಿಗೆ ತಗುಲಿತು!
ಸ್ವಾಮೀಜಿಯ ಕೌಶಲ್ಯವನ್ನು ಕಂಡು ಮಕ್ಕಳು ಅಚ್ಚರಿಗೊಂಡು ಸ್ವಾಮೀ ವಿವೇಕಾನಂದರ ಬಳಿ ಹೋಗಿ ’ನೀವು ಇದನ್ನು ಹೇಗೆ ಮಾಡಿದಿರಿ ?’ ಎಂದು ಕೇಳಿದರು.
ಅದಕ್ಕೆ ವಿವೇಕಾನಂದರು ನಗುತ್ತ ’ನಾನು ಎಂದಿಗೂ ಬಂದೂಕಿನಿಂದ ಗುರಿ ಇಡಲಿಲ್ಲ’ ಎಂದು ಹೇಳುತ್ತಾರೆ. ಆಗ ಹುಡುಗರು ’ಹಾಗಿದ್ದರೆ ನೀವು ಇಷ್ಟು ಒಳ್ಳೆಯ ರೀತಿಯಲ್ಲಿ ಹೇಗೆ ಗುರಿಇಟ್ಟಿರಿ ?’ ಎಂದು ಕೇಳುತ್ತಾರೆ.
ಅದಕ್ಕೆ ಸ್ವಾಮೀ ವಿವೇಕಾನಂದರು ’ನಿಮಗೆ ಒಂದು ರಹಸ್ಯವನ್ನು ಹೇಳುತ್ತೇನೆ. ನೀವು ಏನೇ ಮಾಡಿದರೂ ಬೇರೆ ಯಾವುದರ ಬಗ್ಗೆಯೂ ಯೋಚಿಸದೇ ನಿಮ್ಮ ಸಂಪೂರ್ಣ ಗಮನವನ್ನು ಅದರ ಮೇಲೆ ಕೇಂದ್ರೀಕರಿಸಿರಿ. ನೀವು ಬಂದೂಕಿನಿಂದ ಗುರಿಯಿಡುತ್ತಿದ್ದಲ್ಲಿ ನಿಮ್ಮ ಮನಸ್ಸನ್ನು ಗುರಿಯ ಮೇಲೆ ಕೇಂದ್ರೀಕರಿಸಿರಿ. ನಿಮ್ಮ ಗುರಿ ತಪ್ಪುವುದಿಲ್ಲ.
ಏಕಾಗ್ರತೆಯಿಂದ ಅದ್ಭುತಗಳನ್ನು ಸಾಧಿಸಬಹುದು. ನಾವು ಓದುವಾಗಲೂ ಕೈಯಲ್ಲಿರುವ ಪಾಠದ ಬಗ್ಗೆಯೇ ವಿಚಾರ ಮಾಡಬೇಕು. ಆಗಲೇ ನೀವು ಓದಿರುವ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು.’ ಎಂದು ಹೇಳಿದರು.
ಕೃಪೆ: ಹಿಂದು ಜಾಗೃತಿ.