ದೊಡ್ಡಬಳ್ಳಾಪುರ (Doddaballapura): ದಾಂಪತ್ಯ ಜೀವನದಲ್ಲಿ ಬದುಕು ಮೂಡಿದ್ದ ಹಿನ್ನೆಲೆಯಲ್ಲಿ ವಿಚ್ಚೇದನ ಪಡೆಯುವ ಸಲುವಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ದಂಪತಿ ಶನಿವಾರ ನಡೆದ ಲೋಕ ಆದಾಲತ್‌ನಲ್ಲಿ ಒಂದಾಗಿ, ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ.
ನ್ಯಾಯಾಧೀಶರಾದ ಆರ್.ಜೆ.ಪ್ರವೀಣ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹ ಹೆಚ್ಚಾಗುತ್ತಿವೆ. ವಿಚ್ಛೇದನ ಪಡೆಯುವವರ ಅಧಿಕವಾಗುತ್ತಿರುವುದು ಬೇಸರದ ಸಂಗತಿ. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕಾದರೆ ಶಾಂತ ಮನಸ್ಥಿತಿ ಮುಖ್ಯ.
ಮಾರ್ಗದರ್ಶನ ಸಣ್ಣ ಪುಟ್ಟ ವ್ಯಾಜ್ಯಗಳಿಂದ ಮನಸ್ಸು ಕೆಡಿಸಿಕೊಳ್ಳುವ ಬದಲು ಎಲ್ಲರೂ ಪೊಂದಾಣಿಕೆ ಜೀವನ ನಡೆಸಿದರೆ ಇಂತಹ ಪ್ರಕರಣ ನಡೆಯುವುದಿಲ್ಲ. ವಿಚ್ಚೇದನಕ್ಕೆ ಮುಂದಾಗಿರುವ ದಂಪತಿಗೆ ಈ ಪ್ರಕರಣ ಒಂದು ಮಾರ್ಗದರ್ಶನ ಎಂದರು.
ಸುಮಾರು 6 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ 2024 ರಲ್ಲಿ ವಿಚ್ಚೇದನ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ದಂಪತಿಗಳ ಮಗುವಿನ ಭವಿಷ್ಯದ ಹಿತದೃಷ್ಟಿ ಯಿಂದ ಇಬ್ಬರನ್ನು ಒಂದುಗೂಡಿಸಲು ತೀರ್ಮಾನಿಸಿ ಲೋಕ ಆದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಜತೆಗೂಡಿಸಲಾಗಿದೆ ಎಂದು ಮಹಿಳಾ ಪರ ವಕೀಲ ವೆಂಕಟಾಚಲಪತಿ ಹೇಳಿದರು.
ಈ ಸಂದರ್ಭದಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಮೇಶ್, ಜೆಎಂಎಫ್‌ಸಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಎಚ್.ಎ.ಶಿಲ್ಪಾ, 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರವಿ ಬೆಟಗಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿಮಾವಿನಕುಂಟೆ, ಉಪಾಧ್ಯಕ್ಷ ಎಂ.ಆರ್.ಸುರೇಶ್, ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ವಕೀಲರು ಇದ್ದರು.
2018ರಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದ ಎನ್.ಹನುಮಂತರಾಜು ಮತ್ತು ಆರ್.ನಾಗಮಣಿ ಕೌಟುಂಬಿಕ ಕಲಹದಿಂದ 2024ರಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು.