ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಪ್ರಸಿದ್ದ ಕ್ಷೇತ್ರ ಮಧುರೆ ಹೋಬಳಿ ಕನಸವಾಡಿಯಲ್ಲಿ ಶ್ರೀ ಶನಿಮಹಾತ್ಮ ಸ್ವಾಮಿಯ 70ನೇ ವರ್ಷದ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಹಣ್ಣು, ದವನ ಸಮರ್ಪಿಸಿ ಧನ್ಯತೆ ಮೆರೆದರು.
ಬ್ರಹ್ಮ ರಥೋತ್ಸವದ ಅಂಗವಾಗಿ, ಶ್ರೀ ಶನಿಮಹಾತ್ಮ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಯಾಗ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ವಿವಿಧ ಗ್ರಾಮಗಳಿಂದ ಪಾನಕ, ಕೋಸಂಬರಿಗಳನ್ನು ಮಾಡಿಕೊಂಡು ಬಂದಿದ್ದ ರೈತರು ಎತ್ತಿನ ಗಾಡಿಗಳಲ್ಲಿ ತಂದು ಭಕ್ತಾದಿಗಳಿಗೆ ಹಂಚಿಕೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಥೋತ್ಸವಕ್ಕೂ ಮುನ್ನ ಶನಿಮಹಾತ್ಮಸ್ವಾಮಿ ಮೆರವಣಿಗೆ ದೇವರನ್ನು ಪಾನಕ ಹಂಚಿಕೆ ಸ್ಥಳಕ್ಕೆ ಹೊತ್ತುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು.
ಬ್ರಹ್ಮರಥೋತ್ಸವದ ಕಾರ್ಯಕ್ರಮಗಳು
ಬ್ರಹ್ಮರಥೋತ್ಸವದ ಅಂಗವಾಗಿ ಬ್ರಹ್ಮ ರಥೋತ್ಸವದ ಅಂಗವಾಗಿ ಪ್ರತಿದಿನ ರಾತ್ರಿ ನಡೆಯುವ ನಾಟಕೋತ್ಸವದಲ್ಲಿ ಭಾಗವಹಿಸುವ ಪ್ರತಿ ತಂಡಗಳಿಗೆ ದೇವಾಲಯದ ವತಿಯಿಂದ ₹6,500 ಪ್ರೋತ್ಸಾಹ ನೀಡಲಾಗುವುದು ಎಂದು ದೇವಾಲಯದ ಧರ್ಮದರ್ಶಿ ಕೆ.ವಿ.ಪ್ರಕಾಶ್ ತಿಳಿಸಿದ್ದಾರೆ.
ಮಾರ್ಚ್ 8 ರಂದು ರಾತ್ರಿ 6 ಗಂಟೆಗೆ ಗಣಪತಿ ಪ್ರಾರ್ಥನೆ, ಧ್ವಜಾರೋಹಣ, ವಿವಿಧ ಹೋಮಗಳು ನಡೆಯಲಿವೆ. ಮಾರ್ಚ್ 10 ರಂದು ರಾತ್ರಿ 7.30ಕ್ಕೆ ಬೆಳ್ಳಿ ರಥದಲ್ಲಿ ಕಾಕವಾಹನೋತ್ಸವ, ತಮಟೆ ವಾಧ್ಯ,ವೀರಗಾಸೆ ನೃತ್ಯ, ಸಂಗೀತ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 11 ರಂದು ರಾತ್ರಿ 8 ಗಂಟೆಗೆ ಬೆಳ್ಳಿ ಫಲ್ಲಕ್ಕಿ ಉತ್ಸವ ಮತ್ತು ಸಂಗೀತ ರಸಸಂಜೆ ನಡೆಯಲಿದೆ. ಮಾರ್ಚ್ 12 ರಂದು ರಾತ್ರಿ 9 ಗಂಟೆಗೆ ಚಂದ್ರ ಮಂಡಲೋತ್ಸವ, ಕೀಲುಕುದುರೆ ಕಾರ್ಯಕ್ರಮ ನಡೆಯಲಿವೆ.
ಮಾರ್ಚ್ 14 ರಂದು ಸಂಜೆ 7 ಗಂಟೆಗೆ ಕಾಕವಾಹನೋತ್ಸವ ಮತ್ತು ಸಂಗೀತ ಸಂಜೆ ಕಾರ್ಯಕ್ರಮ, ಮಾರ್ಚ್ 15 ರಂದು ಬೆಳಿಗ್ಗೆ 9 ಗಂಟೆಗೆ ಸುಪ್ರಭಾತೋತ್ಸವ, ಡೊಳ್ಳು ಕುಣಿತ ನಡೆಯಲಿದೆ.