ದೊಡ್ಡಬಳ್ಳಾಪುರ (Doddaballapura); ನಗರದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದವರು ಜಮೀನು ನೋಂದಣಿಗೆ ಬಂದಿದ್ದರೆನ್ನಲಾದ ವೇಳೆಯೇ.. ನಿನ್ನೆ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta raid) ನಡೆಸಿದ್ದು, ಗಣ್ಯರು ಒಂದು ಕ್ಷಣ ಗಲಿಬಿಲಿಗೆ ಒಳಗಾಗಿದ್ದು ಕಂಡು ಬಂತು.
ಗುರುವಾರ ಮಧ್ಯಾಹ್ನ 3.30ರ ವೇಳೆಗೆ ಉಪಲೋಕಾಯುಕ್ತ ಕೆಎನ್ ಫಣೀಂದ್ರ, ಎಸ್ಪಿ ಉದೇಶ್ ಟಿಜೆ, ನೇತೃತ್ವದಲ್ಲಿ ನಾಲ್ಕೈದು ಕಾರುಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಉಪ ನೋಂದಣಾಧಿಕಾರಿ ಕಚೇರಿಗೆ ದಿಢೀರ್ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.
ಈ ವೇಳೆ ಕಚೇರಿಗೆ ಬಂದಿದ್ದ ಸಾರ್ವಜನಿಕರ ಬಳಿ ಹೆಚ್ಚಿನ ಹಣ ಇಟ್ಟುಕೊಂಡವರನ್ನು ವಿಚಾರಣೆ ನಡೆಸಿದರು.
ಇತರೆ ಅಧಿಕಾರಿಗಳು ಜೂಟ್
ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ಇತರೆ ಇಲಾಖೆಯ ಅಧಿಕಾರಿಗಳು ಬಾಗಿಲು ಬಡಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ಲೇವಡಿ ಮಾಡಿದರು.
ಇದಕ್ಕೆ ಪೂರಕವೆಂಬಂತೆ ಅಭಿಲೇಖಾಲಯ, ಹಕ್ಕು ದಾಖಲೆ ವಿಭಾಗದ ಕಚೇರಿ ಸಿಬ್ಬಂದಿಗಳು ಬಾಗಿಲಿಗೆ ಬೀಗ ಬಡಿದುಕೊಂಡು ಸ್ಥಳದಿಂದ ಕಾಣೆಯಾಗಿದ್ದರು. ಅಲ್ಲದೆ ತಹಶಿಲ್ದಾರ್ ಕೂಡ ಕಚೇರಿಯಲ್ಲಿ ಲಭ್ಯವಿರಲಿಲ್ಲ.
ಖ್ಯಾತರ ನೋಂದಣಿ ವೇಳೆ ದಾಳಿ
ಆಶ್ಚರ್ಯಕರ ಬೆಳವಣಿಗೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಪ್ರಸಿದ್ಧರಾದ ಘಟಾನುಘಟಿಗಳು ನೋಂದಣಿಗೆ ಬಂದಿದ್ದ ವೇಳೆಯೇ ಲೋಕಾಯುಕ್ತರ ದಾಳಿ ನಡೆದಿದೆ ಎಂಬುದು ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಯಿತು.
ಕನ್ನಡ ಚಲನಚಿತ್ರ ಮತ್ತು ಸೀರಿಯಲ್ ನಿರ್ದೇಶಕ ಟಿ.ಎನ್.ಸೀತಾರಾಂ, ನಿರ್ಮಾಪಕ ಕೆ.ಮಂಜು, ನಿವೃತ್ತ ಡಿವೈಎಸ್‌ಪಿ ಕೋನಪ್ಪ ರೆಡ್ಡಿ ಸೇರಿದಂತೆ ಇನ್ನು ಕೆಲವು ಗಣ್ಯ ವ್ಯಕ್ತಿಗಳು ಬಂದಿದ್ದು ಲೋಕಾಯುಕ್ತ ದಾಳಿ ವೇಳೆ ಹೊರಾಂಗಣದಲ್ಲಿ ಕಾದು ನಿಂತಿದ್ದು ಕಂಡು ಬಂದಿತು.
ಬೀಗ ಹೊಡೆದು ಪರಿಶೀಲನೆ
ದಾಳಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪಲೋಕಾಯುಕ್ತ ಕೆಎನ್ ಫಣೀಂದ್ರ, ಗುರುವಾರ ಸುಮಾರು ಇಪ್ಪತೈದು ಕಡೆ ಸಬ್ ರಿಜಿಸ್ಟ್ರಾರ್ ಆಫೀಸ್ ಗಳ ಮೇಲೆ ರೈಡ್ ಮಾಡಲಾಗಿದೆ. ಅದರಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ, ಬ್ಯಾಟರಾಯನಪುರ, ಯಲಹಂಕ ಈ ನಾಲ್ಕು ಕಡೆ ನಾನು ನೋಡ್ತಿದೀನಿ.
ಈಗ ಆನ್ ಲೈನ್ ಮಾಡಿರೋದ್ರಿಂದ ಭ್ರಷ್ಟಾಚಾರ ಕಡಿಮೆ ಆಗಿರಬಹುದು ಎಂದು ಬಂದ್ವಿ. ಆದರೆ ಇಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಹಾಜರಾತಿ ಸರಿ ಇಲ್ಲ, ಡೈಲಿ ಕ್ಯಾಶ್ ರಿಜಿಸ್ಟರ್ ಮೇಂಟೇನ್ ಮಾಡಿಲ್ಲ.. ಕೇಳಿದರೆ ಸ್ಟಾಫ್ ಇಲ್ಲ ಅಂತಾರೆ.
ರೆಕಾರ್ಡ್ ರೂಂ ಇದೆ ಆದ್ರೆ ಬೀಗ ತೆಗೆಯೋಕ್ಕೆ ಆಗ್ತಿಲ್ಲ.. ರೆಕಾರ್ಡ್ ರೂ ಕಸ್ಟೋಡಿಯನ್ ನಾನೆ ಅಂತಾರೆ ಆದ್ರೆ ಬೀಗ ತೆಗಿ ಅಂದ್ರೆ ಆಗ್ತಿಲ್ಲ ಅದ್ಯಾವ ಬೀಗ ತಂದಿದಾರೋ ಏನೋ ಎಂದು ಅನುಮಾನ ವ್ಯಕ್ತಪಡಿಸಿದರು.
ಇನ್ನೂ ಏನೇನೊ ನ್ಯೂನ್ಯತೆ ಇದೆಯೊ ಎಲ್ಲವನ್ನ ಚೆಕ್ ಮಾಡ್ಲಿಕ್ಕೆ ನಮ್ಮ ಸಿಬ್ಬಂದಿಗೆ ಹೇಳಿದ್ದೇನೆ. ಅವರು ಸಂಜೆಯವರೆಗೆ ಇಲ್ಲೆ ಇದ್ದು ಎಲ್ಲವನ್ನ ಪರಿಶೀಲನೆ ಮಾಡ್ತಾರೆ. ಬೀಗ ತೆಗಿಲಿಲ್ಲ ಅಂದ್ರೆ ಬೀಗ ಹೊಡೆದಾದರು ಅದರಲ್ಲಿ ಏನೇನು ನ್ಯೂನ್ಯತೆಗಳಿದೆಯೊ ಎಲ್ಲ ವನ್ನ ಚೆಕ್ ಮಾಡಿ ಅಂತ ಸೂಚನೆ ನೀಡಿದ್ದೇನೆ.
ಯಾವ್ಯಾವ ರಿಜಿಸ್ಟರ್ ಮೇಂಟೇನ್ ಮಾಡಬೇಕು, ಯಾವುದೆಲ್ಲ ಮಾಡಿಲ್ಲ. ಎಲ್ಲಾ ಚೆಕ್ ಮಾಡ್ತಾರೆ. ಜನಗಳುನ ಕೂಡ ಲಂಚ ಕೊಟ್ಟು ಕೆಲ್ಸ ಮಾಡಿಸಿಕೊಳ್ತಾರ? ಅಥವಾ ಹಂಗೆ ಮಾಡಿಸಿಕೊಳ್ತಾರ ಎಲ್ಲ ನೋಡಬೇಕು..
ಎಷ್ಟು ಅರ್ಜಿಗಳು ಬಂದಿವೆ, ಬಾಕಿ ಎಷ್ಟಿವೆ,ಏನಾದ್ರು ಕೊಡ್ಲಿ ಅಂತ ಕಾಯ್ತಿದಾರ ಅನ್ನೋದನ್ನ ನಮ್ಮ ಆಫೀಸರ್ಸ್ ಚೆಕ್ ಮಾಡ್ತಾರೆ ಎಂದರು.