ಲಂಡನ್: ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ ಖಲಿಸ್ತಾನಿ ಹೋರಾಟಗಾರರು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರ ಕಾರನ್ನು ಅಡ್ಡಗಟ್ಟಿ ತ್ರಿವರ್ಣ ಧ್ವಜವನ್ನು ಹರಿದ ಘಟನೆ ನಡೆದಿದೆ.
ಈ ಘಟನೆಯನ್ನು ಭಾರತ ಖಂಡಿಸಿದ್ದು, ಬ್ರಿಟನ್ ಹೈಕಮಿಷರ್‌ಗೆ ಸಮನ್ಸ್ ಜಾರಿ ಮಾಡಿದೆ.
ಬ್ರಿಟನ್ ಈ ದಾಳಿಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಜೈ ಶಂಕರ್ ಅವರು ಗುರುವಾರ ಬಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ತಮ್ಮ ಕಾರಿನಲ್ಲಿ ಹೊರಡಲು ಅನುವಾಗುತ್ತಿದಾಗ ಈ ಘಟನೆ ನಡೆದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖಲಿಸ್ತಾನಿಗಳ ದುಷ್ಕೃತ್ಯವನ್ನು ಖಂಡಿಸಿರುವ ಭಾರತ ಈ ಸಂಬಂಧ ಭದ್ರತಾಲೋಪದ ಬಗ್ಗೆ ವಿವರಣೆ ಪಡೆಯಲು ಬ್ರಿಟನ್ ಹೈಕಮಿಷನರ್‌ಗೆ ಸಮನ್ಸ್ ನೀಡಿದೆ.
ಘಟನೆ ಕುರಿತು ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘ವಿದೇ ಶಾಂಗ ಸಚಿವರ ಲಂಡನ್ ಭೇಟಿಯಲ್ಲಿ ಗಂಭೀರ ಸ್ವರೂಪದ ಭದ್ರತಾ ಲೋಪವಾಗಿದೆ. ಇದನ್ನು ನಾವು ಖಂಡಿಸುತ್ತೇವೆ.
ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳ ಈ ಸಣ್ಣ ಗುಂಪಿನ ಪ್ರಚೋದನಕಾರಿ ಚಟುವಟಿಕೆಗಳನ್ನು ನಾವು ಖಂಡಿಸುತ್ತೇವೆ.
ಈ ಶಕ್ತಿಗಳು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿವೆ.
ಯುಕೆ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ಹೇಳಿದೆ.