ದೊಡ್ಡಬಳ್ಳಾಪುರ (Doddaballapura): ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನಂತರ ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ತಾತ್ಸರದಿಂದ ಮೈಮರೆತರೆ, ಪ್ರಸ್ತುತ ಒಳ್ಳೆಯ ದಾರಿಯಲ್ಲಿ ಜೀವನ ನಡೆಸುತ್ತಿದ್ದರು, ಪೊಲೀಸರು ಬಂಧಿಸಿ ಜೈಲಿಗಟ್ಟುತ್ತಾರೆ ಎಂಬುದಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಸಾಕ್ಷಿಯಾಗುತ್ತಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದ ಪೊಲೀಸರು ಸುಮಾರು 20 ಕ್ಕೂ ಹೆಚ್ಚು ವರ್ಷಗಳ ಹಿಂದಿನ ಕಳ್ಳತನ, ಅತ್ಯಾಚಾರ ಮುಂತಾದ 4 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾದೆ ಉಳಿದಿದ್ದ 5 ಮಂದಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.
ಎರಡು ದಶಕ ಹಿಂದಿನ ಪ್ರಕರಣ
ಎರಡು ದಶಕಗಳಿಂದ ಪರಾರಿಯಾಗಿದ್ದ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಗರಾಜು (47 ವರ್ಷ) ಮತ್ತು ಶ್ರೀನಿವಾಸಲು (39 ವರ್ಷ) ಅವರು ಕಳೆದ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಬ್ಬರೂ 2004 ರಲ್ಲಿ ತಾಲ್ಲೂಕಿನ ಕೈಗಾರಿಕಾ ಪ್ರದೇಶವಾದ ಬಾಶೆಟ್ಟಿಹಳ್ಳಿ ಬಳಿಯ ಟ್ರಾನ್ಸ್ ಎಲೆಕ್ಟ್ರಿಕ್ ಮೋಟರ್ ಕಂಪನಿಯ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕೆಲಸ ಮಾಡುತ್ತಿದ್ದರು.
ಕಂಪನಿಗೆ ಬೀಗ ಹಾಕಿದ್ದ ಸಮಯದಲ್ಲಿ ವಾಚ್ ಮನ್ ಗಳಾಗಿದ್ದ ಇವರಿಬ್ಬರು ಕಂಪನಿಯಲ್ಲಿನ ಮೋಟರ್‌ಗಳನ್ನು ಕಳವು ಮಾಡಿ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದರು.
ಆ ವೇಳೆ ನಾಗರಾಜುಗೆ 26 ವರ್ಷ ಮತ್ತು ಶ್ರೀನಿವಾಸಲು 19 ವರ್ಷ ಇಬ್ಬರ ಮೇಲೆ ಮೋಟರ್ ಕಳ್ಳತನದ ಆರೋಪದ ಮೇಲೆ ಪ್ರಕರಣ ದಾಖಲಾಗಿ ಮೂರು ತಿಂಗಳ ಕಾಲ ಜೈಲಿನಲ್ಲಿದ್ದ ಗೆಳೆಯರು ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು.
ಪ್ರಕರಣ ವಜಾ ಆಗಿದೆ ಎಂದು ತಿಳಿದ ಕಾರಣ ನಾವು ಈ ವಿಚಾರವನ್ನು ಮರೆತಿದ್ದೆವು ಎಂದು ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳು ತಿಳಿಸಿದ್ದಾರೆ.
ಇಪ್ಪತ್ತು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗಳ ಮೇಲೆ ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ನ್ಯಾಯಾಲಯ ಎಲ್‌ಆರ್‌ಪಿಗಳು ಎಂದು ನಿರ್ಧಾರ ಮಾಡಿತ್ತು.
ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಸಾಧಿಕ್ ಪಾಷ ಅವರ ನೇತೃತ್ವದಲ್ಲಿ ತನಿಖೆಗೆ ಇಳಿದ ತಂಡ ಆರೋಪಿಗಳನ್ನು ಆಂದ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂದ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ, ಪುಟ್ಟಪರ್ತಿ ಎರಡು ಪೊಲೀಸ್ ಠಾಣೆಗಳಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡಿದ್ದ ನಾಗರಾಜು, ನಂತರ ಗಂಡ ಹೆಂಡತಿ ನಡುವೆ ಜಗಳವಾಗಿ ಕೆಲಸ ಬಿಟ್ಟು, ಧರ್ಮಾವರಂ ಜಿಲ್ಲೆ ಸಿದ್ದರಾಮಪುರಂ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ.
ಬಂಧನವಾಗಿ ಮೂರು ತಿಂಗಳ ನಂತರ ಜಾಮೀನಿನ ಮೇಲೆ ಹೊರಗೆ ಬಂದ ಮತ್ತೊಬ್ಬ ಆರೋಪಿ ಶ್ರೀನಿವಾಸಲು ಆಂದ್ರಪ್ರದೇಶದ ಖ್ಯಾತ ವಿಶ್ವವಿದ್ಯಾಲಯದಲ್ಲಿ ಎಂಬಿಎ ಜೊತೆಗೆ ಮಾರ್ಕೆಟಿಂಗ್ ಗ್ರಾಜ್ಯುಯೆಷನ್ ಪಡೆದು ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ.
ಒಮ್ಮೆ ಜೈಲಿಗೆ ಹೋಗಿ ಬಂದ ಬಳಿಕ ಬುದ್ಧಿ ಕಲಿತಿದ್ದ ಇಬ್ಬರೂ ಆರೋಪಿಗಳು ಮತ್ತೆ ಕೆಟ್ಟದಾರಿ ಹಿಡಿಯದೆ ಓದಿ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದು ಜೀವನ ನಡೆಸುತ್ತಿದ್ದರು. ಆದರೆ ಒಮ್ಮೆ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎಂಬಂತೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.