ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಚಿತ್ರತಂಡದ ಮೇಲೆ ಅರಣ್ಯಾಧಿಕಾರಿಗಳ ದಾಳಿ ನಡೆದಿದೆ.
ನಾಮ ಚಿಲುಮೆಯ ಬಳಿ ಚಿತ್ರೀಕರಣ ನಡೆಸುತ್ತಿದ್ದ “ರಾಣಾ” ಚಿತ್ರತಂಡದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಅನುಮತಿ ಇಲ್ಲದೇ ಚಿತ್ರೀಕರಣ ನಡೆಸಿದ್ದಕ್ಕಾಗಿ ಕೇಸು ಜಡಿದಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಸೋದರನಾಗಿರುವ ರಾಣಾ (ಅಭಿಷೇಕ್) ನಟನೆಯ ಸಿನಿಮಾಗೆ ಕಾಟೇರ ನಿರ್ದೇಶಕ ತರುಣ್ ಸುಧೀರ್ ನಿರ್ದೇಶನದ ಹೊಣೆ ಹೊತ್ತಿದ್ದರು.
ತರುಣ್ ಸುಧೀರ್ ಕ್ರಿಯೇಟಿವ್ ಹೆಸರಿನಲ್ಲಿ ಅನುಮತಿಗೂ ಸಹ ಮನವಿ ಸಲ್ಲಿಸಲಾಗಿದೆ. ಆದರೆ ಅನುಮತಿ ಸಿಗದಿದ್ದರೂ ಚಿತ್ರೀಕರಣ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ತುಮಕೂರಿನ ಎಸಿಎಫ್ ಪವಿತ್ರಾ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಚಿತ್ರೀಕರಣ ಸಮಯದಲಿ ಸುಮಾರು ಮಂದಿ ಭಾಗಿಯಾಗಿದ್ದು, ಅಲ್ಲಿದ್ದ ಕ್ಯಾರವಾನ್, ಕ್ಯಾಮೆರಾ ಲೈಟ್, ಅಡುಗೆ ಸಾಮಾಗ್ರಿಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.