ಹುಬ್ಬಳ್ಳಿ: ಹಿಂದುತ್ವದ ಪರ ನಿಲುವು ಪ್ರಕಟಿಸುವ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸದ್ಯದ ಇತರ ಕಾಂಗ್ರೆಸ್ಸಿಗರಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಪ್ರಶಂಸಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಸದಸ್ಯರ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್‌ನವರು ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿ ಉಳಿಸಲು ಹೋರಾಟ ಮಾಡಿದ್ದಾರೆ. ಆದರೆ ಸದ್ಯ ಭಾರತೀಯ ಸಂಸ್ಕೃತಿ ನಾಶ ಮಾಡಲಾಗುತ್ತಿದೆ. ಇದರ ನಡುವೆ ಹಳೆಯ ಕಾಂಗ್ರೆಸ್‌ನವರ ರಕ್ತ ಇನ್ನೂ ಅನೇಕ ಕಾಂಗ್ರೆಸ್ಸಿಗರಲ್ಲಿದೆ. ಅವರಲ್ಲಿ ಡಿಕೆ ಶಿವಕುಮಾರ್ ಮಾದರಿಯಾಗಿದ್ದಾರೆ ಎಂದರು.
ಕಾಂಗ್ರೆಸನಲ್ಲಿ ಮತಬ್ಯಾಂಕ್‌ಗಾಗಿ ಮುಸ್ಲಿಂ ತುಷ್ಟಿಕರಣ ಮಾಡಲಾಗುತ್ತಿದೆ. ಆದರೆ ಡಿಕೆ ಶಿವಕುಮಾರ್ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಹಿಂದುತ್ವದ ಬಗ್ಗೆ ಜಾಗೃತರಾಗಿದ್ದಾರೆ. ತಾವು ಹಿಂದುವಾಗಿ ಹುಟ್ಟಿದ್ದೇನೆ. ಹಿಂದುವಾಗಿಯೇ ಸಾಯುತ್ತೇನೆ ಎಂದಿದ್ದಾರೆ ಎಂದು ಈಶ್ವರಪ್ಪ ಶ್ಲಾಘಿಸಿದರು.
ಅಲ್ಲದೆ ಹಿಂದುತ್ವ ಕೇವಲ ಬಿಜೆಪಿಯ ಸ್ವತ್ತಲ್ಲ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಹಿಂದೂಧರ್ಮ. ಈ ನಿಟ್ಟಿನಲ್ಲಿ ನಮ್ಮ ಕ್ರಾಂತಿವೀರ ಬ್ರಿಗೇಡ್ ಕೆಲಸ ಮಾಡಲು ಸಿದ್ದವಾಗಿದೆ ಎಂದರು.