ಬೆಂಗಳೂರು: ಬಿಜೆಪಿಯ (BJP) ಹಲವು ಶಾಸಕರು ನನ್ನ ಸಂಪರ್ಕಿಸಲು ಯತ್ನಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸ್ಪೋಟಕ ಮಾಹಿತಿ ಬಯಲು ಮಾಡಿದ್ದಾರೆ.
ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದು, ಡಿಕೆ ಶಿವಕುಮಾರ್ ಬಿಜೆಪಿ ಸೇರ್ಪಡೆ ಸಾಧ್ಯತೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಒಡೆದ ಮನೆಯಾಗಿರುವ ಮನೆಯನ್ನು ಮೊದಲು ಸರಿಯಾಗಿಟ್ಟುಕೊಳ್ಳವಂತೆ ತಿರುಗೇಟು ನೀಡಿದರು.
ಹಲವು ಬಿಜೆಪಿ ಶಾಸಕರು ನನ್ನ ಸಂಪರ್ಕಿಸಲು ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಈಗಾಗಲೇ ಸಚಿವರು ಹೇಳಿ ಬಿಟ್ಟಿದ್ದಾರೆ. ಅದರ ಬಗ್ಗೆ ನಾನು ಹೆಚ್ಚಿನ ಚರ್ಚೆ ಮಾಡಲ್ಲ ಎಂದರು.
ಬಳಿಕ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದೇ ದೇವಸ್ಥಾನಕ್ಕೆ ಭೇಟಿ ನೀಡಿದರೂ, ಯಾವುದೇ ಧಾರ್ಮಿಕ ವಿಚಾರವನ್ನು ಪ್ರಸ್ತಾಪಿಸಿದರೂ ಅದು ಸಂಚಲನ ಸೃಷ್ಟಿಸಲಾಗುತ್ತದೆ.
ಒಮ್ಮೆ ನಾನು ಯೇಸುವಿನ ಶಿಲಾಮೂರ್ತಿಗೆ ಪ್ರೋತ್ಸಾಹ ನೀಡಿದ್ದಕ್ಕೆ ನಿಮ್ಮ ಜಿಲ್ಲೆಯವರೇ ನನ್ನನ್ನು “ಏಸು ಕುಮಾರ” ಎಂದು ಕರೆದಿದ್ದರು. ಇನ್ನೊಂದು ಸಂದರ್ಭದಲ್ಲಿ, ಒಬ್ಬ ಎಂಪಿ ಮುಸ್ಲಿಮರನ್ನು ಅವಹೇಳನಕಾರಿಯಾಗಿ ಮಾತನಾಡಿದಾಗ, ನಾನು “ಅವರೆಲ್ಲ ನಮ್ಮ ಸಹೋದರರು, ಅವರಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಚಿಕನ್, ಮಟನ್ ಕಡಿಯುವುದನ್ನು ನಾವು ಮಾಡಲು ಸಾಧ್ಯವೇ? ಅವರೇ ಕಡಿಯಬೇಕು. ಯಾವ ಕೆಲಸ ಯಾರು ಮಾಡಬೇಕೋ ಅವರೇ ಮಾಡಬೇಕು” ಎಂದು ಹೇಳಿದ್ದೆ. ಅವರನ್ನು ಬ್ರದರ್ಸ್ ಅಂದದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು ಎಂದು ಡಿಕೆ ಶಿವಕುಮಾರ್ ಹೇಳಿದರು.
ನಾನು ಶಿವನ ದೇವಸ್ಥಾನಕ್ಕೆ ಹೋದರೆ ಅಲ್ಲಿಯೂ ಏನೋ ಒಂದು ರೀತಿಯಲ್ಲಿ ಕರೆಯುತ್ತಾರೆ, ನಾನು ಕುಂಭಮೇಳಕ್ಕೆ ಹೋಗಿದ್ದೆ ಅಲ್ಲಿ ನೀರಿಗೆ ಜಾತಿ ಇದೆಯೇ? ಧರ್ಮ ಇದೆಯೇ? ಅಥವಾ ಪಕ್ಷ ಇದೆಯೇ? ಕುಂಭಮೇಳದಲ್ಲಿ ಭಾಗವಹಿಸುವುದು ತಪ್ಪೇ? ಯಾರು ಏನು ಲೆಕ್ಕಾಚಾರ ಹಾಕಿಕೊಂಡರೂ ಅದರ ಅವಶ್ಯಕತೆ ಇಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.