Site icon Harithalekhani

ಭಿಕ್ಷೆ ಬೇಡಿ ಬಿಜೆಪಿ ಪ್ರತಿಭಟನೆ..!; ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ ವಾಗ್ದಾಳಿ

R Ashoka lashed out against the state government

R Ashoka lashed out against the state government

ಮಂಡ್ಯ: ವಿಶ್ವವಿದ್ಯಾಲಯಗಳಿಂದ ಲಾಭ ಬರುತ್ತಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಲಾಗಿದೆ. ಕಾಂಗ್ರೆಸ್‌ ಸರ್ಕಾರ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R Ashoka) ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿದೆ. ಇದಕ್ಕಾಗಿ ಬಿಜೆಪಿ ಸರ್ಕಾರ ಹೊಸ 9 ವಿಶ್ವವಿದ್ಯಾಲಯಗಳನ್ನು ನೀಡಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಅದನ್ನು ಕಿತ್ತುಕೊಂಡಿದೆ. ವಿವಿಗಳನ್ನು ಮುಚ್ಚಲು ರೂಪಿಸಿದ ವರದಿಯಲ್ಲಿ ವಿವಿಗಳು ಲಾಭದಾಯಕವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.

ಶಿಕ್ಷಣ ಸಂಸ್ಥೆಗಳಿಂದಲೂ ಆದಾಯ ಬರಬೇಕು ಎಂಬುದು ಸರ್ಕಾರ ಉದ್ದೇಶ. ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಭಿಕ್ಷೆ ಬೇಡುತ್ತಿದ್ದಾರೆ.

ಈ ಬಾರಿ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರೇ ಅತ್ಯಧಿಕ ಸಾಲ ಮಾಡಿದ್ದಾರೆ ಎಂದು ದೂರಿದರು.

ಒಂದು ಜಿಲ್ಲೆಯಲ್ಲಿ ಒಂದು ವಿಶ್ವವಿದ್ಯಾಲಯವಿದ್ದರೆ ಆ ಜಿಲ್ಲೆ ಶಿಕ್ಷಣದಲ್ಲಿ ಸ್ವಾವಲಂಬಿಯಾಗುತ್ತದೆ.
ಶಿಕ್ಷಣ ಎಂದರೆ ವ್ಯಾಪಾರವಲ್ಲ, ಅದು ನಮ್ಮ ದೇಶದ ಆಸ್ತಿ.

ಮುಚ್ಚಿರುವ ಬಾರ್‌ಗಳನ್ನು ತೆರೆದು ವಿವಿಗಳನ್ನು ಮುಚ್ಚಲಾಗುತ್ತಿದೆ. ಎಲ್ಲ ವಿವಿಗಳನ್ನು ನಡೆಸಲು 252 ಕೋಟಿ ರೂ. ಇದ್ದರೆ ಸಾಕು. ಉಚಿತವಾಗಿ 2 ಸಾವಿರ ರೂ. ನೀಡಿ ವಿವಿಗಳನ್ನು ಮುಚ್ಚುತ್ತೇವೆಂದರೆ ಗ್ಯಾರಂಟಿಗೆ ಬೆಲೆ ಇರುವುದಿಲ್ಲ. ಬಿಜೆಪಿ ಸರ್ಕಾರ ವಿಶ್ವವಿದ್ಯಾಲಯಗಳನ್ನು ರೂಪಿಸಿದಾಗ ಹೊಸ ಹುದ್ದೆಗಳನ್ನು ಸೃಷ್ಟಿ ಮಾಡಿರಲಿಲ್ಲ. ಇರುವ ಸಿಬ್ಬಂದಿಯನ್ನೇ ನೇಮಕ ಮಾಡಲಾಗಿತ್ತು ಎಂದರು.

ವಿಶ್ವವಿದ್ಯಾಲಯ ಮುಚ್ಚುವುದರಿಂದ ಲಾಭವಾಗುತ್ತದೆಯೋ, ನಷ್ಟವಾಗುತ್ತದೆಯೋ ಎಂಬುದು ಬೇಕಿಲ್ಲ. ಇದರಿಂದ ಮಕ್ಕಳಿಗೆ ಏನು ತೊಂದರೆಯಾಗುತ್ತದೆ ಎಂಬ ಬಗ್ಗೆ ಸರ್ಕಾರ ಸ್ಪಷ್ಟಪಡಿಸಲಿ.

ನೀರಿಗಾಗಿ ಹೋರಾಟ ಮಾಡುವಂತೆಯೇ, ವಿದ್ಯೆಗಾಗಿ ಮಂಡ್ಯದ ಜನರು ಹೋರಾಟ ಮಾಡಲಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲವೆಂದರೆ ಅದನ್ನು ನೇರವಾಗಿ ಹೇಳಲಿ. ನಾವೆಲ್ಲರೂ ಹಣ ಸಂಗ್ರಹಿಸಿ ವಿಶ್ವವಿದ್ಯಾಲಯ ನಡೆಸುತ್ತೇವೆ ಎಂದರು.

ಪಾಪರ್‌ ಸರ್ಕಾರ

ಗ್ಯಾರಂಟಿಗಳಿಂದಾಗಿ ಪಾಪರ್‌ ಆಗಿರುವ ಸರ್ಕಾರ, ವಿವಿಗಳನ್ನು ಮುಚ್ಚಿದೆ. ಮಂಡ್ಯ, ಚಾಮರಾಜನಗರ ಮೊದಲಾದ ಜಿಲ್ಲೆಗಳು ಶಿಕ್ಷಣದಲ್ಲಿ ಮೇಲಕ್ಕೆ ಬರಬೇಕೆಂದು ವಿವಿಗಳನ್ನು ಆರಂಭಿಸಲಾಗಿತ್ತು. ಈಗ ವಿವಿಗಳನ್ನು ಮುಚ್ಚಿ ಅದೇ ಸ್ಥಳದಲ್ಲಿ ಬಾರ್‌ಗಳನ್ನು ಆರಂಭಿಸಬಹುದು. ಸರ್ಕಾರದ ಉದ್ದೇಶ ವಿದ್ಯೆ ನೀಡುವುದೋ ಅಥವಾ ಮದ್ಯ ಹಂಚುವುದೋ ಎಂದು ತಿಳಿಸಬೇಕು ಎಂದು ಹೇಳಿದರು.

ಸರ್ಕಾರ ಪಾಪರ್‌ ಆಗಿರುವುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಡ. ವಿಶ್ವವಿದ್ಯಾಲಯ ಆರಂಭಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ನೀಡಲಾಗುತ್ತದೆ. ಈಗ ರಾಜ್ಯದ ಪಾಲಿನ ಅನುದಾನ ನೀಡಲು ಇವರಿಗೆ ಸಾಧ್ಯವಾಗುತ್ತಿಲ್ಲ.

ಹಿಂದಿನ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲವೆಂದಾದರೆ ಹೊಸ ಕಟ್ಟಡಗಳು ಎಲ್ಲಿಂದ ಬಂತು? ಮೂಲಸೌಕರ್ಯ ನೀಡಿಯೇ ವಿವಿಗಳನ್ನು ಆರಂಭಿಸಲಾಗಿತ್ತು. ಆದರೆ ಅದನ್ನು ಮುಂದುವರಿಸಲು ಈಗಿನ ಸರ್ಕಾರಕ್ಕೆ ಸಾಧ್ಯ ಆಗುತ್ತಿಲ್ಲ. ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿ ಸದನದಲ್ಲಿ ಈ ಕುರಿತು ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಡಿಕೆ ಶಿವಕುಮಾರ್‌ ಕುಂಭಮೇಳಕ್ಕೆ ಹೋದಾಗ ಕಾಂಗ್ರೆಸ್‌ ಹೈಕಮಾಂಡ್‌ ಏನೂ ಮಾಡಲಿಲ್ಲ. ಪ್ರಧಾನಿಯನ್ನು ಭೇಟಿ ಮಾಡಿದಾಗಲೂ ಏನೂ ಮಾಡಲಿಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿಯನ್ನು ಹಾಡಿ ಹೊಗಳಿದರೂ ಸುಮ್ಮನಿದ್ದರು. ಇತ್ತೀಚೆಗೆ ಈಶ ಫೌಂಡೇಶನ್‌ಗೆ ಹೋಗಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ಗೆ ಧಮ್‌ ಇದ್ದರೆ ಡಿಕೆ ಶಿವಕುಮಾರ್‌ ಅವರನ್ನು ಅಮಾನತು ಮಾಡಲಿ. ನಾವ್ಯಾರೂ ಡಿಕೆ ಶಿವಕುಮಾರ್‌ ಅವರನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ ಎಂದರು.

Exit mobile version